ADVERTISEMENT

ಪದಕ ಬೇಟೆ ಛಲದಲ್ಲಿ ಕರ್ನಾಟಕ

ಯೂತ್ ಖೇಲೊ ಇಂಡಿಯಾ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 19:32 IST
Last Updated 3 ಜೂನ್ 2022, 19:32 IST
ಖೇಲೊ ಇಂಡಿಯಾ ಯೂತ್ ಗೇಮ್ಸ್‌ ಮ್ಯಾಸ್ಕಾಟ್– ಟ್ವಿಟರ್ ಚಿತ್ರ
ಖೇಲೊ ಇಂಡಿಯಾ ಯೂತ್ ಗೇಮ್ಸ್‌ ಮ್ಯಾಸ್ಕಾಟ್– ಟ್ವಿಟರ್ ಚಿತ್ರ   

ಬೆಂಗಳೂರು/ಪಂಚಕುಲಾ: ಇಲ್ಲಿಯ ಥಾವು ದೇವಿಲಾಲ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರದಿಂದ ಆರಂಭವಾಗಲಿರುವ ಖೇಲೊ ಇಂಡಿಯಾ ಯೂತ್ ಗೇಮ್ಸ್‌ ನಲ್ಲಿ ಕರ್ನಾಟಕದ ಈಜು ತಂಡದ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ.

ಬೇರೆ ಬೇರೆ ರಾಜ್ಯಗಳಿಂದ ಒಟ್ಟು4700 ಅಥ್ಲೀಟ್‌ಗಳು ಈ ಕೂಟದಲ್ಲಿ ಸ್ಪರ್ಧಿಸುವರು. ಹೋದ ಸಲ ಕರ್ನಾಟಕ ತಂಡವು ಸಮಗ್ರ ಪದಕ ಗಳಿಕೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು. ಅದರಲ್ಲಿ ರಾಜ್ಯದ ಈಜುಪಟುಗಳದ್ದೇ ಸಿಂಹಪಾಲು ಇತ್ತು. 21 ಚಿನ್ನ, 16 ಬೆಳ್ಳಿ ಮತ್ತು 7 ಕಂಚಿನ ಪದಕಗಳನ್ನು ಈಜು ತಂಡವು ಗೆದ್ದಿತ್ತು.ಕರ್ನಾಟಕದ ಈಜು ತಂಡದಲ್ಲಿ 45 ಸ್ಪರ್ಧಿಗಳು ಮತ್ತು ಐವರು ಕೋಚ್‌ಗಳು ಇದ್ದಾರೆ.

ಇದಲ್ಲದೇ ರಾಜ್ಯಕ್ಕೆ ಜುಡೊ (1), ಬ್ಯಾಸ್ಕೆಟ್‌ಬಾಲ್ (1), ಬ್ಯಾಡ್ಮಿಂಟನ್ (1), ಟೆನಿಸ್ (3), ಅಥ್ಲೆಟಿಕ್ಸ್ (4), ಟಿಟಿ (1), ವೇಟ್‌ಲಿಫ್ಟಿಂಗ್ (3) ಮತ್ತು ವಾಲಿಬಾಲ್ (1) ಕ್ರೀಡೆಗಳಲ್ಲಿಯೂ ಪದಕಗಳು ಒಲಿದಿದ್ದವು. ಈ ಸಲವೂ ಪದಕ ಬೇಟೆಯಾಡುವ ಹುಮ್ಮಸ್ಸಿನಲ್ಲಿ ರಾಜ್ಯ ತಂಡವಿದೆ.

ADVERTISEMENT

ಕೂಟದಲ್ಲಿ ಒಟ್ಟು 25 ಕ್ರೀಡೆಗಳನ್ನು ಸಂಘಟಿಸಲಾಗುತ್ತಿದೆ. ಕ್ರೀಡಾಂಗಣದಲ್ಲಿರುವ ಬಹುಶಿಸ್ತೀಯ ಕ್ರೀಡೆಗಳಿಗಾಗಿ ನಿರ್ಮಿಸಲಾಗಿರುವ ಒಳಾಂಗಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಅಥ್ಲೆಟಿಕ್ಸ್, ಫುಟ್‌ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಕಬಡ್ಡಿ, ಹ್ಯಾಂಡ್‌ಬಾಲ್, ಕುಸ್ತಿ, ವಾಲಿಬಾಲ್, ಬಾಕ್ಸಿಂಗ್ ಮತ್ತು ಐದು ದೇಶಿ ಕ್ರೀಡೆಗಳು ನಡೆಯಲಿವೆ.

ಅಂಬಾಲಾ (ಜಿಮ್ನಾಸ್ಟಿಕ್ಸ್, ಈಜು), ಶಹಾಬಾದ್ (ಹಾಕಿ), ಚಂಡಿಗಡ (ಆರ್ಚರಿ, ಫುಟ್‌ಬಾಲ್) ಮತ್ತು ನವದೆಹಲಿ (ಸೈಕ್ಲಿಂಗ್ , ಶೂಟಿಂಗ್) ನಗರಗಳಲ್ಲಿಯೂ ಕೂಡ ಬೇರೆ ಬೇರೆ ಸ್ಪರ್ಧೆಗಳು ನಡೆಯಲಿವೆ.

ಹಾಲಿ ಚಾಂಪಿಯನ್ ಮಹಾರಾಷ್ಟ್ರ ತಂಡವು 357 ಅಥ್ಲೀಟ್‌ಗಳನ್ನು ಕಣಕ್ಕಿಳಿಸುತ್ತಿದೆ. ಕೂಟದಲ್ಲಿ ಈ ತಂಡವೇ ಹೆಚ್ಚಿನ ಸಂಖ್ಯೆಯ ಸ್ಪರ್ಧಾಳುಗಳನ್ನು ಹೊಂದಿದೆ. ದೆಹಲಿ ತಂಡದಲ್ಲಿ 339 ಅಥ್ಲೀಟ್‌ಗಳಿದ್ದಾರೆ. ಅಂಡಮಾನ್ –ನಿಕೋಬಾರ್ ತಂಡದಲ್ಲಿ ಆರು ಸ್ಪರ್ಧಿಗಳಷ್ಟೇ ಇದ್ದು, ಅತ್ಯಂತ ಸಣ್ಣ ಬಳಗ ಇದಾಗಿದೆ. ಹೋದ ಸಲ ಕರ್ನಾಟಕ ತಂಡವು ನಾಲ್ಕನೇ ಸ್ಥಾನ ಗಳಿಸಿತ್ತು.

ಅಥ್ಲೆಟಿಕ್ಸ್ ವಿಭಾಗದಲ್ಲಿ 392 ನೋಂದಣಿಗಳಿವೆ. ಇದು ಎಲ್ಲ ವಿಭಾಗಗಳಿಗಿಂತಲೂ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.