ADVERTISEMENT

Doha Diamond League 2025 | 90 ಮೀ. ಗಡಿ ದಾಟಿದ ನೀರಜ್‌, ಹೊಸ ಮೈಲಿಗಲ್ಲು

ದೋಹಾ ಡೈಮಂಡ್‌ ಲೀಗ್‌: ಚೋಪ್ರಾ ಹೊಸ ಮೈಲಿಗಲ್ಲು

ಪಿಟಿಐ
Published 16 ಮೇ 2025, 19:24 IST
Last Updated 16 ಮೇ 2025, 19:24 IST
<div class="paragraphs"><p>ನೀರಜ್ ಚೋಪ್ರಾ</p></div>

ನೀರಜ್ ಚೋಪ್ರಾ

   

(ಪಿಟಿಐ ಚಿತ್ರ)

ದೋಹಾ: ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಜೋಪ್ರಾ ಅವರು ದೋಹಾದಲ್ಲಿ ಶುಕ್ರವಾರ ರಾತ್ರಿ ನಡೆದ ಡೈಮಂಡ್‌ ಲೀಗ್‌ ಕೂಟದಲ್ಲಿ ಜಾವೆಲಿನ್‌ ಅನ್ನು 90.23 ಮೀಟರ್‌ ದೂರ ಎಸೆದು, ವೈಯಕ್ತಿಕ ಶ್ರೇಷ್ಠ ಸಾಧನೆ ಪ್ರದರ್ಶಿಸಿದರು. 

ADVERTISEMENT

ದೋಹಾದ ಸುಹೀಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಏರಿಳಿತ ಕಂಡ ಪುರುಷರ ಜಾವೆಲಿನ್‌ ಸ್ಪರ್ಧೆಯಲ್ಲಿ 91.06 ಮೀಟರ್‌ ಸಾಧನೆಯೊಂದಿಗೆ ಜರ್ಮನಿಯ ಜೂಲಿಯನ್ ವೆಬರ್‌ ಅಗ್ರಸ್ಥಾನ ಪಡೆದರು. ವೆಬರ್ ಅವರ ಕೊನೆಯ ಪ್ರಯತ್ನಕ್ಕೂ ಮುನ್ನ ಮುನ್ನಡೆ ಕಾಯ್ದುಕೊಂಡಿದ್ದ ನೀರಜ್‌ ಅಂತಿಮವಾಗಿ ಎರಡನೇ ಸ್ಥಾನ ಗಳಿಸಿದರು.

27 ವರ್ಷ ವಯಸ್ಸಿನ ನೀರಜ್‌ ಇದೇ ಮೊದಲ ಬಾರಿ 90 ಮೀಟರ್‌ ಮೈಲಿಗಲ್ಲು ದಾಟಿದರು. ಈ ಸಾಧನೆ ಮಾಡಿದ ವಿಶ್ವದ 25ನೇ ಮತ್ತು ಏಷ್ಯಾದ ಮೂರನೇ ಜಾವೆಲಿನ್‌ ಥ್ರೋಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ಯಾರಿಸ್‌ ಒಲಿಂಪಿಕ್‌ ಚಾಂಪಿಯನ್‌, ಪಾಕಿಸ್ತಾನದ ಅರ್ಷದ್‌ ನದೀಂ (92.97 ಮೀ), ಮತ್ತು ಚೀನಾ ತೈಪೆಯ ಚೆಂಗ್ ಚಾವೊ ಸುನ್ (91.36 ಮೀ) ಈ ಸಾಧನೆ ಮಾಡಿದ ಏಷ್ಯಾದ ಇನ್ನಿಬ್ಬರು.

ಹಲವು ಬಾರಿಯ ಒಲಿಂಪಿಕ್ ಚಾಂಪಿಯನ್ ಯಾನ್ ಝೆಲೆಜ್ನಿ ಮಾರ್ಗದರ್ಶನದಲ್ಲಿ ಕಣಕ್ಕೆ ಇಳಿದ ನೀರಜ್‌ ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದರು. ಮೊದಲ ಪ್ರಯತ್ನದಲ್ಲಿ 88.44 ಮೀಟರ್‌ ಈಟಿ ಎಸೆದರೆ, ಎರಡನೇ ಮತ್ತು ಐದನೇ ಪ್ರಯತ್ನಗಳು ಫೌಲ್‌ ಆದವು. ನಾಲ್ಕನೇ ಮತ್ತು ಆರನೇ ಪ್ರಯತ್ನದಲ್ಲಿ ಕ್ರಮವಾಗಿ 80.56 ಮೀ ಮತ್ತು 88.20 ಮೀ ಸಾಧನೆ ಮೂಡಿಬಂತು. ಮೂರನೇ ಪ್ರಯತ್ನದಲ್ಲಿ ತನ್ನ ಬಹುವರ್ಷದ ಗುರಿಯನ್ನು ಈಡೇರಿಸುತ್ತಿದ್ದಂತೆ ನೀರಜ್ ಅವರನ್ನು ಭಾರತದ ಕಿಶೋರ್‌ ಜೇನಾ ಸೇರಿದಂತೆ ಸಹ ಸ್ಪರ್ಧಿಗಳು ಅವರನ್ನು ಅಭಿನಂದಿಸಿದರು. ‌‌

ಜೆಕ್‌ ರಿಪಬ್ಲಿಕ್‌ನ ಝೆಲೆಜ್ನಿ ಅವರನ್ನು ತಮ್ಮ ವೈಯಕ್ತಿಕ ಕೋಚ್ ಆಗಿ ನೇಮಿಸಿಕೊಂಡ ಕೆಲವೇ ತಿಂಗಳುಗಳ ನಂತರ ನೀರಜ್‌ ಈ ಸಾಧನೆ ಮಾಡಿರುವುದು ವಿಶೇಷ. ಝೆಲೆಜ್ನಿ (98.48 ಮೀ) ಹೆಸರಿನಲ್ಲಿ ಇದೇ ಸ್ಪರ್ಧೆಯ ವಿಶ್ವದಾಖಲೆಯೂ ಇದೆ.

‘90 ಮೀಟರ್ ಗಡಿ ದಾಟಿದ್ದಕ್ಕೆ ತುಂಬಾ ಸಂತೋಷವಾಗಿದೆ. ಆದರೆ ಇದು ಕಹಿ-ಸಿಹಿ ಅನುಭವ. ಮುಂಬರುವ ಕೂಟಗಳಲ್ಲಿ ಇದಕ್ಕಿಂತ ಹೆಚ್ಚು ದೂರ ಎಸೆಯಬಲ್ಲೆ ಎಂದು ಆತ್ಮವಿಶ್ವಾಸ ಮೂಡಿದೆ’ ಎಂದು ಚೋಪ್ರಾ ಸ್ಪರ್ಧೆಯ ನಂತರ ಪ್ರತಿಕ್ರಿಯಿಸಿದರು.‌‌ 

30 ವರ್ಷ ವಯಸ್ಸಿನ ವೆಬರ್‌ ಕೊನೆಯ ಮತ್ತು ಆರನೇ ಪ್ರಯತ್ನದಲ್ಲಿ ನೀರಜ್‌ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಜರ್ಮನಿಯ ಈ ಅಥ್ಲೀಟ್‌ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 90 ಮೀಟರ್ ಎಸೆದು ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದರು. ಅವರು ನಾಲ್ಕು ಬಾರಿ 88 ಮೀಟರ್‌ಗಿಂತ ಹೆಚ್ಚು ದೂರ ಈಟಿಯನ್ನು ಎಸೆದು ಗಮನ ಸೆಳೆದರು. ಮೊದಲೆರಡು ಪ್ರಯತ್ನದಲ್ಲಿ ಕ್ರಮವಾಗಿ 83.82 ಮೀ ಮತ್ತು 85.57 ಮೀ ಎಸೆದರು. ನಂತರದ ನಾಲ್ಕು ಪ್ರಯತ್ನದಲ್ಲಿ 89.06 ಮೀ, 88.05 ಮೀ, 89.84 ಮೀ ಮತ್ತು 91.06 ಮೀ ಎಸೆತಗಳೊಂದಿಗೆ ತನ್ನ ಸಾಧನೆಯನ್ನು ಸುಧಾರಿಸಿಕೊಂಡರು.‌

ಎರಡು ಬಾರಿಯ ವಿಶ್ವ ಚಾಂಪಿಯನ್ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ  ಗ್ರೆನೆಡಾದ ಆಂಡರ್ಸನ್ ಪೀಟರ್ಸ್ (85.64 ಮೀ.) ಮೂರನೇ ಸ್ಥಾನ ಪಡೆದರು. ಕಿಶೋರ್‌ ಜೇನಾ (78.60) ಎಂಟನೇ ಸ್ಥಾನ ಗಳಿಸಿದರು.‌‌

ಪಾರುಲ್ ಚೌಧರಿಗೆ ಆರನೇ ಸ್ಥಾನ

ಭಾರತದ ಪಾರುಲ್ ಚೌಧರಿ ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಓಟದಲ್ಲಿ 9 ನಿ. 13.39 ಸೆ.ಗಳೊಡನೆ ಆರನೇ ಸ್ಥಾನ ಪಡೆದು ಉತ್ತಮ ಸಾಧನೆ ಪ್ರದರ್ಶಿಸಿದರಲ್ಲದೇ, ಆ ಹಾದಿಯಲ್ಲಿ ರಾಷ್ಟ್ರೀಯ ದಾಖಲೆಯನ್ನೂ ಸ್ಥಾಪಿಸಿದರು.

ಕಳೆದ ವರ್ಷ ಯುಜೇನ್ ಡೈಮಂಡ್ ಲೀಗ್‌ನಲ್ಲಿ ಪದಾರ್ಪಣೆ ಮಾಡಿದ್ದ ವೇಳೆ ಅವರು 16ನೇ ಸ್ಥಾನ ಪಡೆದಿದ್ದರು. ಆದರೆ ಇಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. 29 ವರ್ಷ ವಯಸ್ಸಿನ ಪಾರುಲ್ 2023ರಲ್ಲಿ ರಾಷ್ಟ್ರೀಯ ದಾಖಲೆ (9:15.31)ಸ್ಥಾಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.