ADVERTISEMENT

ನೀರಜ್‌ ಚೋಪ್ರಾ ಕ್ಲಾಸಿಕ್‌ ಜಾವೆಲಿನ್‌ ಕೂಟ ಬೆಂಗಳೂರಿಗೆ ಸ್ಥಳಾಂತರ

ಮೇ 24ರಂದು ಕಂಠೀರವ ಕ್ರೀಡಾಂಗಣದಲ್ಲಿ ಸ್ಪರ್ಧೆ, ವಿಶ್ವದ ತಾರೆಯರು ಭಾಗಿ

ಪಿಟಿಐ
Published 21 ಏಪ್ರಿಲ್ 2025, 14:08 IST
Last Updated 21 ಏಪ್ರಿಲ್ 2025, 14:08 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ನವದೆಹಲಿ: ಪಂಚಕುಲದಲ್ಲಿ ಮೇ 24ರಂದು ನಿಗದಿಯಾಗಿದ್ದ ಬಹುನಿರೀಕ್ಷಿತ ನೀರಜ್‌ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಾವೆಲಿನ್‌ ಥ್ರೋ ತಾರೆ, ಸಂಘಟಕ ನೀರಜ್‌ ಚೋಪ್ರಾ ತಿಳಿಸಿದರು.

ಚೊಚ್ಚಲ ಆವೃತ್ತಿಯ ಸ್ಪರ್ಧೆಯಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ ಮತ್ತು 2016ರ ರಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ಥಾಮಸ್ ರೋಹ್ಲರ್ ಸೇರಿದಂತೆ ಹಲವು ತಾರೆಯರು ಭಾಗವಹಿಸಲಿದ್ದಾರೆ. ಪಂಚಕುಲದ ತಾವೂ ದೇವಿಲಾಲ್ ಕ್ರೀಡಾಂಗಣದಲ್ಲಿ ನೇರಪ್ರಸಾರಕ್ಕೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಸ್ಥಳಾಂತರಿಸಲಾಗಿದೆ. ಈ ಸ್ಪರ್ಧೆಗೆ ವಿಶ್ವ ಅಥ್ಲೆಟಿಕ್ಸ್‌ನಿಂದ ‘ಎ’ ಕೆಟಗರಿ ಸ್ಥಾನಮಾನ ದೊರೆಕಿದ್ದು, ತನ್ನ ಈವೆಂಟ್ ಕ್ಯಾಲೆಂಡರ್‌ನಲ್ಲಿಯೂ ಸ್ಥಳ ಬದಲಾವಣೆ ದಾಖಲಿಸಿದೆ.

ಪ್ಯಾರಿಸ್‌ ಒಲಿಂಪಿಕ್ಸ್‌ ಕಂಚು ವಿಜೇತ ಗ್ರೆನೆಡಾದ ಪೀಟರ್ಸ್, ಜರ್ಮನಿಯ ರೋಹ್ಲರ್, ರಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಕೆನ್ಯಾದ ಜೂಲಿಯಸ್ ಯೆಗೊ ಮತ್ತು ಅಮೆರಿಕದ ಕರ್ಟಿಸ್ ಥಾಂಪ್ಸನ್ ಅವರು ಕೂಟದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ ಚಾಂಪಿಯನ್‌, ಪಾಕಿಸ್ತಾನದ ಅರ್ಷದ್ ನದೀಂ ಅವರನ್ನೂ ಆಹ್ವಾನಿಸಲಾಗಿದೆ. ತರಬೇತುದಾರರ ಜೊತೆ ಚರ್ಚಿಸಿದ ನಂತರ ಸಂಪರ್ಕಿಸುವುದಾಗಿ ಅವರು ಹೇಳಿದ್ದಾರೆ. ಈತನಕ ದೃಢಪಡಿಸಿಲ್ಲ’ ಎಂದು ಸೋಮವಾರ ವರ್ಚುವಲ್‌ ಮಾಧ್ಯಮ ಸಂವಾದದಲ್ಲಿ 27 ವರ್ಷ ವಯಸ್ಸಿನ ಚೋ‍ಪ್ರಾ ಮಾಹಿತಿ ನೀಡಿದರು.

ADVERTISEMENT

‘ಪಂಚಕುಲದಲ್ಲಿ ಸ್ಪರ್ಧೆಯನ್ನು ಆಯೋಜಿಸಲು ಬಯಸಿದ್ದೆ. ಆದರೆ, ಅಲ್ಲಿನ ಕ್ರೀಡಾಂಗಣದಲ್ಲಿ ಫ್ಲಡ್‌ಲೈಟ್ ಸಮಸ್ಯೆಗಳಿವೆ. ವಿಶ್ವ ಅಥ್ಲೆಟಿಕ್ಸ್‌ನ ನೇರಪ್ರಸಾರಕ್ಕೆ ಬೇಕಾಗಿರುವ 600 ಲಕ್ಸ್ (ಬೆಳಕಿನ ತೀವ್ರತೆಯ ಅಳತೆ) ಪಂಚಕುಲದ ಕ್ರೀಡಾಂಗಣದಲ್ಲಿ ಇಲ್ಲ. ಅದನ್ನು ಅಳವಡಿಸಲು ಬಹಳಷ್ಟು ಸಮಯಾವಕಾಶ ಬೇಕಾಗುತ್ತದೆ’ ಎಂದು ಹೇಳಿದರು.

‘ಕಂಠೀರವ ಕ್ರೀಡಾಂಗಣದಲ್ಲಿ ಈ ಸ್ಪರ್ಧೆ ಆಯೋಜಿಸುವ ಸಂಬಂಧ ಕರ್ನಾಟಕದ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ್ದೇನೆ. ಜೆಎಸ್‌ಡಬ್ಲ್ಯೂ ತಂಡವು ಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಸಜ್ಜಾಗಿದೆ. ಅಂತರರಾಷ್ಟ್ರೀಯ ಸ್ಪರ್ಧಿಗಳಿಗೆ ಅತ್ಯುತ್ತಮ ಆತಿಥ್ಯ ನೀಡುವುದು ಮತ್ತು ಕ್ರೀಡಾಭಿಮಾನಿಗಳಿಗೆ ಅತ್ಯುತ್ತಮ ಅನುಭವ ನೀಡುವುದು ನಮ್ಮ ಆದ್ಯತೆ’ ಎಂದರು.

‘ನಾನು ಸೇರಿದಂತೆ ಭಾರತದ ಮೂರು ಅಥವಾ ನಾಲ್ಕು ಸ್ಪರ್ಧಿಗಳು ಕಣಕ್ಕೆ ಇಳಿಯಲಿದ್ದೇವೆ. ಇದು ಟೋಕಿಯೊದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಉತ್ತಮ ವೇದಿಕೆಯಾಗಿದೆ. ವಾರ್ಷಿಕವಾಗಿ ನಡೆಯುವ ಈ ಕೂಟದಲ್ಲಿ ಸದ್ಯಕ್ಕೆ ಪುರುಷರ ಜಾವೆಲಿನ್ ಸ್ಪರ್ಧೆ ಅಳವಡಿಸಲಾಗಿದೆ. ಭವಿಷ್ಯದಲ್ಲಿ ಇತರ ಸ್ಪರ್ಧೆಗಳನ್ನು ಸಹ ಸೇರಿಸಲಾಗುತ್ತದೆ’ ಎಂದು ತಿಳಿಸಿದರು.

ಈ ಕೂಟವನ್ನು ಭಾರತ ಅಥ್ಲೆಟಿಕ್ಸ್ ಫೆಡರೇಶನ್ (ಎಎಫ್‌ಐ) ಮತ್ತು ವಿಶ್ವ ಅಥ್ಲೆಟಿಕ್ಸ್ ಸಹಯೋಗದೊಂದಿಗೆ ಚೋಪ್ರಾ ಮತ್ತು ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಜಂಟಿಯಾಗಿ ಆಯೋಜಿಸುತ್ತಿದೆ. ಕ್ರೀಡಾಭಿಮಾನಿಗಳು ಟಿಕೆಟ್‌ ಕೊಂಡು ಈ ಸ್ಪರ್ಧೆಯನ್ನು ವೀಕ್ಷಿಸಬಹುದಾಗಿದೆ.

ಚೋಪ್ರಾ ಅವರು ಏಪ್ರಿಲ್ 16ರಂದು ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಪೋಚ್‌ ಆಹ್ವಾನ ಟ್ರ್ಯಾಕ್‌ ಕೂಟದಲ್ಲಿ 84.52 ಮೀಟರ್ ಸಾಧನೆಯೊಡನೆ ಈ ಬಾರಿಯ ಋತು ಆರಂಭಿಸಿದ್ದಾರೆ. ಮೇ 16ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.