ADVERTISEMENT

ಪಾಕ್‌ ಕ್ರೀಡಾಪಟು ನನ್ನ ಜಾವೆಲಿನ್ ಹಿಡಿದ ವಿಚಾರವನ್ನು ದೊಡ್ಡದಾಗಿಸಬೇಡಿ: ನೀರಜ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2021, 11:24 IST
Last Updated 26 ಆಗಸ್ಟ್ 2021, 11:24 IST
ನೀರಜ್‌ ಚೋಪ್ರಾ ಬಿಡುಗಡೆ ಮಾಡಿರುವ ವಿಡಿಯೊದ ಚಿತ್ರ
ನೀರಜ್‌ ಚೋಪ್ರಾ ಬಿಡುಗಡೆ ಮಾಡಿರುವ ವಿಡಿಯೊದ ಚಿತ್ರ    

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಜಾವೆಲಿನ್‌ ಎಸೆತಗಾರ ಅರ್ಷದ್‌ ನದೀಮ್‌, ಭಾರತದ ನೀರಜ್‌ ಚೋಪ್ರಾ ಅವರ ಜಾವೆಲಿನ್‌ ಹಿಡಿದಿದ್ದ ವಿಚಾರ ಮತ್ತು ಅದಕ್ಕೆ ಸಂಬಂಧಿಸಿದ ವಿವಾದಗಳಿಗೆ ಸ್ವತಃ ನೀರಜ್‌ ತೆರೆ ಎಳೆದಿದ್ದಾರೆ.

ಈ ಕುರಿತು ಗುರುವಾರ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ನೀರಜ್‌, ವಿಚಾರವನ್ನು ದೊಡ್ಡದು ಮಾಡದಂತೆ ಹೇಳಿದ್ದಾರೆ.

ADVERTISEMENT

‘ಜಾವೆಲಿನ್‌ಗಳನ್ನು ಎಲ್ಲರೂ ಒಟ್ಟಿಗೆ ಇಟ್ಟಿರುತ್ತೇವೆ. ಅವುಗಳನ್ನು ಯಾರುಬೇಕಾದರೂ ತೆಗೆದುಕೊಳ್ಳಬಹುದು. ಅರ್ಷದ್‌ ನನ್ನ ಜಾವೆಲಿನ್ ಹಿಡಿದು ಥ್ರೋಗೆ (ಎಸೆಯಲು) ತಯಾರಿ ಮಾಡುತ್ತಿದ್ದರು. ಇದು ದೊಡ್ಡ ವಿಷಯವೇನಲ್ಲ. ಪಾಕಿಸ್ತಾನದ ಕ್ರೀಡಾಪಟು ನನ್ನ ಜಾವೆಲಿನ್ ತೆಗೆದುಕೊಂಡಿದ್ದರಲ್ಲಿ ತಪ್ಪೇನೂ ಇಲ್ಲ. ಎಲ್ಲವೂ ನಿಯಮಗಳ ಪ್ರಕಾರವೇ ನಡೆದಿದೆ’ ಎಂದು ನೀರಜ್ ಹೇಳಿದ್ದಾರೆ. ಅಲ್ಲದೆ, ವಿಚಾರವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದೂ ಮನವಿ ಮಾಡಿದ್ದಾರೆ.

‘ನಿಮ್ಮ ಹಿತಾಸಕ್ತಿ ಮತ್ತು ಪ್ರಚಾರಕ್ಕಾಗಿ ದಯವಿಟ್ಟು ನನ್ನ ಮತ್ತು ನನ್ನ ಹೇಳಿಕೆಗಳನ್ನು ಬಳಸಿಕೊಳ್ಳಬೇಡಿ ಎಂದು ವಿನಂತಿಸುತ್ತೇನೆ. ಒಗ್ಗಟ್ಟಾಗಿರಲು ಕ್ರೀಡೆ ನಮಗೆ ಕಲಿಸುತ್ತದೆ. ನನ್ನ ಇತ್ತೀಚಿನ ಹೇಳಿಕೆಗಳ ಬಗ್ಗೆ ಸಾರ್ವಜನಿಕರಿಂದ ಬಂದ ಕೆಲವು ಪ್ರತಿಕ್ರಿಯೆಗಳನ್ನು ನೋಡಿ ನನಗೆ ತುಂಬಾ ನಿರಾಶೆಯಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‌

ಇತ್ತೀಚೆಗೆ ಮಾಧ್ಯಮ ಸಂಸ್ಥೆಯೊಂದಕ್ಕೆ ನೀರಜ್‌ ಚೋಪ್ರಾ ಅವರು ನೀಡಿದ್ದ ಸಂದರ್ಶನದಲ್ಲಿನ ಕೆಲ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗಿದೆ.

‘ಫೈನಲ್‌ಗೂ ಮುನ್ನ ನಾನು ನನ್ನ ಜಾವೆಲಿನ್ ಹುಡುಕುತ್ತಿದ್ದೆ. ಅದೆಲ್ಲಿದೆ ಎಂದು ಹುಡುಕಲು ನನಗೆ ಆಗಲಿಲ್ಲ. ಪಾಕಿಸ್ತಾನದ ಅರ್ಷದ್ ನದೀಮ್ ನನ್ನ ಜಾವೆಲಿನ್ ಹಿಡಿದು ತಿರುಗಾಡುತ್ತಿರುವುದನ್ನು ತಟ್ಟನೇ ಗಮನಿಸಿದೆ. ಅವರ ಬಳಿಗೆ ಹೋಗಿ, ಈ ಜಾವೆಲಿನ್ ನನ್ನದು ಎಂದು ಹೇಳಿದೆ. ಅರ್ಷದ್‌ ಅದನ್ನು ನನಗೆ ಮರಳಿಸಿದರು. ಅದಕ್ಕಾಗಿಯೇ ನಾನು ತರಾತುರಿಯಲ್ಲಿ ಥ್ರೋ ಮಾಡಿರುವುದನ್ನು ನೀವು ನೋಡಿದ್ದೀರಿ’ ಎಂದಿದ್ದರು.

ನೀರಜ್‌ ಅವರ ಈ ಮಾತುಗಳು ವೈರಲ್‌ ಆಗಿದ್ದವು. ಪಾಕಿಸ್ತಾನಿ ಆಟಗಾರನ ಮೇಲೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು.

ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಥ್ರೋದಲ್ಲಿ ಚಿನ್ನದಪದಕ ಗೆದ್ದಿರುವ ಭಾರತದ ಹೆಮ್ಮೆಯ ಅಥ್ಲೀಟ್ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.