
ಪ್ರಾತಿನಿಧಿಕ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯ ಹೆಗ್ಗುರುತುಗಳಲ್ಲಿ ಒಂದಾಗಿರುವ ಜವಾಹರಲಾಲ್ ನೆಹರೂ ಕ್ರೀಡಾಂಗಣವನ್ನು ತೆರವು ಮಾಡಿ ಆ ಸ್ಥಳದಲ್ಲಿ ಕ್ರೀಡಾನಗರಿಯನ್ನು ನಿರ್ಮಿಸಲಾಗುವುದು. ಇಲ್ಲಿ ಇತರ ಕ್ರೀಡಾ ಚಟುವಟಿಕೆಗಳಿಗೆ ಅವಕಾಶದ ಜೊತೆ ಅಥ್ಲೀಟುಗಳ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗುವುದು.
ಇದನ್ನು ಕ್ರೀಡಾ ಸಚಿವಾಲಯದ ಮೂಲವೊಂದು ತಿಳಿಸಿದೆ. 102 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ಸೇರಿ ಇತರ ವ್ಯವಸ್ಥೆಗಳನ್ನು ಪುನರ್‌ನಿರ್ಮಾಣ ಮಾಡಲಾಗುವುದು. ಇದು ಪ್ರಸ್ತಾವವಷ್ಟೇ. ಇದಕ್ಕೆ ಕಾಲಮಿತಿ ಮತ್ತು ಅಂದಾಜು ವೆಚ್ಚ ಇನ್ನೂ ಅಂತಿಮಗೊಳಿಸಿಲ್ಲ.
‘ಕ್ರೀಡಾಂಗಣವನ್ನು ಪೂರ್ಣವಾಗಿ ತೆರವು ಮಾಡಲಾಗುವುದು. ಈ ಯೋಜನೆಗೆ ಚಾಲನೆ ನೀಡುವಾಗ ಇಲ್ಲಿರುವ ಉದ್ದೀಪನ ಮದ್ದುಸೇವನೆ ನಿಗ್ರಹ ಘಟಕ (ನಾಡಾ), ರಾಷ್ಟ್ರೀಯ ಡೋಪ್ ಟೆಸ್ಟಿಂಗ್ ಲ್ಯಾಬ್, ಆದಾಯ ತೆರಿಗೆ ಇಲಾಖೆ ಕಚೇರಿಗಳನ್ನು ಬೇರೆ ಕಡೆ ಸ್ಥಳಾಂತರಿಸಲಾಗುವುದು’ ಎಂದು ಈ ಮೂಲ ತಿಳಿಸಿದೆ.
ಈಗ ಇರುವ 100 ಎಕರೆಗಿಂತ ಹೆಚ್ಚಿನ ಸ್ಥಳದ ಗರಿಷ್ಠ ಬಳಕೆಯಾಗುತ್ತಿಲ್ಲ ಎಂದೂ ಹೇಳಿದೆ.
ಈಗ ಇದೇ ಕ್ರೀಡಾಂಗಣದಲ್ಲಿ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರ ಕಚೇರಿ ಮತ್ತು ಸರ್ಕಾರದ ಪ್ರಮುಖ ಯೋಜನೆ ಖೇಲೊ ಇಂಡಿಯಾದ ಯೋಜನಾ ಕಚೇರಿಯೂ ಇದೆ. ಈ ಜಾಗದ ಒಡೆತನವೂ ಪ್ರಾಧಿಕಾರದ ಹೆಸರಿನಲ್ಲಿದೆ.
1982ರಲ್ಲಿ ಏಷ್ಯನ್ ಕ್ರೀಡೆಗಳಿಗಾಗಿ ಈ ಕ್ರೀಡಾಂಗಣ ನಿರ್ಮಿಸಲಾಗಿತ್ತು. 2010ರ ಕಾಮನ್ವೆಲ್ತ್ ಕ್ರೀಡೆಗಳಿಗೂ ಇದೇ ಕ್ರೀಡಾಂಗಣ ಆತಿಥ್ಯ ವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.