ADVERTISEMENT

ಸಿಕ್ಕಿಬಿದ್ದ ಅಥ್ಲೀಟ್‌ ಜ್ಯೋತಿ ಸಿಂಗ್‌

ಪಿಟಿಐ
Published 17 ಜೂನ್ 2019, 20:00 IST
Last Updated 17 ಜೂನ್ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮ್ಯಾರಥಾನ್‌ ಪಟು ಜ್ಯೋತಿ ಸಿಂಗ್‌ ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಷೇಧ ಘಟಕ(ನಾಡಾ) ಸೋಮವಾರ ಹೇಳಿದೆ. ಈ ವರ್ಷಾರಂಭದಲ್ಲಿ ನಡೆದ ನವದೆಹಲಿ ಹಾಫ್‌ ಮ್ಯಾರಥಾನ್‌ನ ಎಲೀಟ್‌ ಮಹಿಳಾ ವಿಭಾಗದಲ್ಲಿ ಅವರು ಚಿನ್ನದ ಪದಕ ಗೆದ್ದಿದ್ದರು.

1 ಗಂಟೆ 22 ನಿಮಿಷ, 20 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದ ಅವರು, ಮೇ 14ರಂದು ತಾತ್ಕಾಲಿಕ ಅಮಾನತುಗೊಂಡಿದ್ದರು. ಸದ್ಯ ಅವರು ಗೆದ್ದ ಪದಕ ಕೈಜಾರುವ ಹಂತದಲ್ಲಿದೆ.

‘ಒಂದು ವೇಳೆ ಅವರು ಚಿನ್ನದ ಪದಕ ಕಳೆದುಕೊಳ್ಳುವುದು ಸತ್ಯವಾದರೆ ಬೆಳ್ಳಿ ಗೆದ್ದವರು ಬಂಗಾದ ಪದಕಕ್ಕೆ ಬಡ್ತಿ ಪಡೆಯುವರು’ ಎಂದು ರೇಸ್‌ನ ನಿರ್ದೇಶಕ ನಾಗರಾಜ ಅಡಿಗ ಹೇಳಿದರು.

ADVERTISEMENT

ನಿಷೇಧಿತ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ವೇಟ್‌ಲಿಫ್ಟರ್‌ ಕೆ.ರವಿಕುಮಾರ್‌ ಕೂಡ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಇತರ ಐದು ಮಂದಿ ವೇಟ್‌ಲಿಫ್ಟರ್‌ಗಳಾದ ವೀರೇಂದ್ರ ಸಿಂಗ್‌ (96 ಕೆಜಿ ವಿಭಾಗ), ದೀಪಿಕಾ (49 ಕೆಜಿ), ವಿಶಾಲ್‌ ಸೋಳಂಕಿ (109 ಕೆಜಿ), ಸೀಮಾ (81ಕೆಜಿ) ಹಾಗೂ ಪೂರ್ಣಿಮಾ ಪಾಂಡೆ (87 ಕೆಜಿ) ಕೂಡ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ನಾಡಾ ಹೇಳಿದೆ.

ಕುಸ್ತಿಪಟು ರೋಹಿತ್‌ ಅಹಿರೆ (ಗ್ರೀಕೊ ರೋಮನ್‌ 72 ಕೆಜಿ ವಿಭಾಗ), ಈಜುಪಟು ಸಾಹಿಲ್‌ ಪವಾರ್‌ (50 ಮೀ. ಫ್ರೀಸ್ಟೈಲ್‌) ಮದ್ದು ಸೇವನೆ ಪರೀಕ್ಷೆಯಲ್ಲಿ ವಿಫಲರಾಗಿ, ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ. ಮಧ್ಯಮ ದೂರದ ಓಟಗಾರ್ತಿ ಪ್ರಿಯಾಂಕಾ ಪಾನ್ವರ್‌ ಅವರ ಮೇಲೆ ನಾಡಾ ಶಿಸ್ತು ಸಮಿತಿ ಹೇರಿದ್ದ ಎಂಟು ವರ್ಷಗಳ ಅಮಾನತು ಆದೇಶವನ್ನೂ ನಾಡಾದ ಮೇಲ್ಮನವಿ ಸಮಿತಿ ಎತ್ತಿಹಿಡಿದಿದೆ. 2011 ಹಾಗೂ 2016ರಲ್ಲಿ ಪ್ರಿಯಾಂಕಾ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು.

ಹಾಕಿ ಆಟಗಾರ ಆಕಾಶ್‌ ಚಿಟ್ಕೆ ಅವರ ಮೇಲೆ ಶಿಸ್ತು ಸಮಿತಿಯುಹೇರಿದ್ದ ಎರಡು ವರ್ಷಗಳ ಅನರ್ಹತಾ ಅವಧಿಯನ್ನು ನಾಡಾ 13 ತಿಂಗಳಿಗೆ ಕಡಿತಗೊಳಿಸಿದೆ. ಉದ್ದೀಪನಾ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಪ್ರಥಮ ಭಾರತೀಯ ಟೆನಿಸ್‌ ಆಟಗಾರ ಎನಿಸಿಕೊಂಡಿಸಿದ್ದ 16 ವರ್ಷ ವಯಸ್ಸಿನ ಆರ್ಯನ್‌ ಭಾಟಿಯಾ ಅವರ ಪ್ರಕರಣವನ್ನು ನಾಡಾದ ಶಿಸ್ತು ಸಮಿತಿ ಕೈಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.