ADVERTISEMENT

ಹಾಕಿ: ಹೊಸ ರ‍್ಯಾಂಕಿಂಗ್‌ ಪದ್ಧತಿ ಜಾರಿ

ಪಿಟಿಐ
Published 14 ಡಿಸೆಂಬರ್ 2019, 5:42 IST
Last Updated 14 ಡಿಸೆಂಬರ್ 2019, 5:42 IST

ಲಾಸನ್‌: ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಶುಕ್ರವಾರ ಹೊಸ ವಿಶ್ವ ರ‍್ಯಾಂಕಿಂಗ್‌ ಪದ್ಧತಿಯನ್ನು ಅನುಷ್ಠಾನಗೊಳಿಸಿದೆ. ಇದು 2020ರ ಜನವರಿ 1ರಿಂದ ಕಾರ್ಯರೂಪಕ್ಕೆ ಬರಲಿದೆ.

‘12 ತಿಂಗಳ ಕಾಲ ವಿವಿಧ ‍ಅಧ್ಯಯನ ಹಾಗೂ ಪ್ರಯೋಗಗಳನ್ನು ನಡೆಸಿದ್ದೆವು. ಇದರ ಆಧಾರದಲ್ಲೇ ಟೂರ್ನಿ ಆಧಾರಿತ ಪದ್ಧತಿಯನ್ನು ಕೈಬಿಟ್ಟು, ಪಂದ್ಯ ಆಧಾರಿತ ಪದ್ಧತಿಯನ್ನು ಜಾರಿಗೆ ತಂದಿದ್ದೇವೆ’ ಎಂದು ಎಫ್‌ಐಎಚ್‌ ಹೇಳಿದೆ.

ಹೊಸ ಪದ್ಧತಿಯ ಪ್ರಕಾರ ಪಂದ್ಯದ ಮಹತ್ವ ಮತ್ತು ಫಲಿತಾಂಶದ ಆಧಾರದಲ್ಲಿ ತಂಡಗಳಿಗೆ ಪಾಯಿಂಟ್ಸ್‌ ನೀಡಲಾಗುತ್ತದೆ.

ADVERTISEMENT

‘ಹೊಸ ಪದ್ಧತಿಗೆ ಹೊಂದಿಕೊಳ್ಳಲು ಎಲ್ಲಾ ತಂಡಗಳಿಗೂ ಸ್ವಲ್ಪ ಸಮಯ ಬೇಕಾಗಬಹುದು. ಬಳಿಕ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ. ಹೊಸ ರ‍್ಯಾಂಕಿಂಗ್‌ ವ್ಯವಸ್ಥೆ ಹಿಂದಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ’ ಎಂದು ಎಫ್‌ಐಎಚ್‌ನ ಕ್ರೀಡೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಜಾನ್‌ ವ್ಯಾಟ್‌ ತಿಳಿಸಿದ್ದಾರೆ.

‘ಹೊಸ ಪದ್ಧತಿ ಅನುಷ್ಠಾನಗೊಂಡರೂ ಸಹ ತಂಡಗಳು ಪ್ರಸ್ತುತ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಹೊಂದಿರುವ ಸ್ಥಾನಗಳಲ್ಲೇ ಮುಂದುವರಿಯಲಿವೆ. ತಂಡಗಳ ಖಾತೆಯಲ್ಲಿ ಇರುವ ಪಾಯಿಂಟ್ಸ್‌ನಲ್ಲೂ ಯಾವುದೇ ಬದಲಾವಣೆಯಾಗುವುದಿಲ್ಲ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.