ADVERTISEMENT

‘ಚಿನ್ನ’ದ ಮೀನು ನಿರಂಜನ್‌

ಸಿ.ಮೋಹನ್‌ ಕುಮಾರ್‌
Published 5 ಮೇ 2019, 19:31 IST
Last Updated 5 ಮೇ 2019, 19:31 IST
ನಿರಂಜನ್‌ ಮುಕುಂದನ್‌ 
ನಿರಂಜನ್‌ ಮುಕುಂದನ್‌    

‘ಕನಸಿನಲ್ಲಿಯೂ ಈಜುಪಟು ಆಗುತ್ತೇನೆ ಅಂದುಕೊಂಡಿರಲಿಲ್ಲ.ಈಗ ನೀರೇ ನನ್ನ ಜಗತ್ತು. ನನ್ನ ಇನ್ನೊಂದು ಮನೆ. ನನ್ನ ನಿಜವಾದ ಗೆಳೆಯ. ನನ್ನ ಸಾಧ್ಯತೆಗಳನ್ನು ವಿಸ್ತರಿಸಿ ಬದುಕು ನೀಡಿದೆ’

ಪ್ಯಾರಾ ಈಜುಪಟು ಎಂ.ನಿರಂಜನ್ ಅವರ ಮಾತುಗಳಿವು. ಇತ್ತೀಚೆಗೆ ಬ್ರೆಜಿಲ್‌ನ ಸಾವೋಪಾಲೊದಲ್ಲಿ ನಡೆದ ವಿಶ್ವ ಈಜು ಸರಣಿಯ 200ಮೀಟರ್ಸ್ ವಿಭಾಗದಲ್ಲಿ ನಿರಂಜನ್ ಚಿನ್ನ, 50ಮೀ ಬಟರ್ ಫ್ಲೈ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 2003ರಲ್ಲಿ ಆರಂಭಿಸಿದ ಈಜು ಅಭ್ಯಾಸ, ಒಟ್ಟು 46 ಅಂತರರಾಷ್ಟ್ರೀಯ ಪದಕಗಳನ್ನು ಗಳಿಸುವಲ್ಲಿಗೆ ಅವರನ್ನು ಕರೆತಂದು ನಿಲ್ಲಿಸಿದೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಅವರ ಪದಕ ಬೇಟೆ 100 ದಾಟುತ್ತದೆ.

ಬೆಂಗಳೂರಿನ ಜೆ.ಪಿ.ನಗರದ ಆರ್.ಮುಕುಂದನ್ ಮತ್ತು ಲಕ್ಷ್ಮೀ ದಂಪತಿ ಮಗನಾಗಿರುವ ಎಂ. ನಿರಂಜನ್ ಅವರು ಹುಟ್ಟಿನಿಂದಲೇ `ಸ್ಪೈನಾ ಬೈಫಿಡಾ’ ಎಂಬ ಕಾಯಿಲೆಗೆ ಒಳಗಾಗಿದ್ದರು. ಅವರ ಎರಡೂ ಕಾಲುಗಳು ಸ್ಪರ್ಶ ಜ್ಞಾನ ಕಳೆದುಕೊಂಡಿದ್ದವು. ಪೋಷಕರು ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರು. ಆ ವೇಳೆ ವೈದ್ಯರೊಬ್ಬರು ಈಜು ಕಲಿಯಲು ಸೂಚಿಸಿದರು. ಬದುಕಿಗೆ ಚೈತನ್ಯ ಸಿಗುವ ಆಸೆಯೊಂದಿಗೆ ನಿರಂಜನ್ ಅವರನ್ನು ಬೆಂಗಳೂರಿನ ಜಯನಗರದ ಪಿ.ಎಂ.ಈಜು ಕೇಂದ್ರಕ್ಕೆ 2003ರಲ್ಲಿ ಅವರ ಪೋಷಕರು ಸೇರಿಸಿದರು. ಆಗ ನಿರಂಜನ್‌ಗೆ 9ವರ್ಷ.ಅಲ್ಲಿಂದಲೇ ಅವರ ಬದುಕಿಗೆ ತಿರುವು ಸಿಕ್ಕದ್ದು.

ADVERTISEMENT

ಭರವಸೆ ಹುಸಿಯಾಗಲಿಲ್ಲ

ಹತ್ತು ದಿನಗಳಲ್ಲೇ ನಿರಂಜನ್ ಈಜು ಕಲಿತರು. ಇವರ ವೇಗದ ಕಲಿಕೆ ಗಮನಿಸಿದ ಕೋಚ್ ಜಾನ್ ಕ್ರಿಸ್ಟೋಫರ್ ಪ್ಯಾರಾ ಅಥ್ಲೀಟ್ ಆಗಬಹುದೆಂಬ ಭರವಸೆಯನ್ನು ಪೋಷಕರಿಗೆ ನೀಡಿದರು. ನಿರಂಜನ್ ಅವರ ಉತ್ಸಾಹದ ಚಿಗುರಿಗೆ ಪೋಷಕರು ನೀರೆರೆದರು.

ಆರಂಭವಾದ ಕ್ರೀಡಾ ಬದುಕು

2004ರಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ ನಿರಂಜನ್50ಮೀ ಬಟರ್ ಫ್ಲೈ ನಲ್ಲಿ ಬೆಳ್ಳಿ ಗೆದ್ದರು. ಅಲ್ಲಿಂದ ಪ್ರತಿ ಚಾಂಪಿಯನ್ ಷಿಪ್ ನಲ್ಲೂ ಪದಕ ಗಳಿಸುತ್ತಾ ಬಂದರು. ಅವರ ಗುರಿ ಇದ್ದದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವುದಾಗಿತ್ತು. ಇದಕ್ಕಾಗಿ ಅವಿರತ ಅಭ್ಯಾಸ ನಡೆಸಿದರು. ನಿತ್ಯ 6 ಗಂಟೆ ಈಜುತ್ತಿದ್ದರು.

ಕನಸು ನನಸು

2012ರಲ್ಲಿ ಬರ್ಲಿನ್‌ನಲ್ಲಿ ನಡೆದ ಜರ್ಮನ್ ಈಜು ಚಾಂಪಿಯನ್‌ಷಿಪ್‌ನಲ್ಲಿ 200ಮೀ. ಫ್ರೀಸ್ಟೈಲ್ ನಲ್ಲಿ ಕಂಚು ಗೆದ್ದರು. ಭಾರತವನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದರು. ಕಂಚು ಗೆದ್ದಾಗ ಅವರಿಗಾದ ಸಂತೋಷ ಅಷ್ಟಿಷ್ಟಲ್ಲ.ಮಗನ ಸಾಧನೆ ತಿಳಿದ ಪೋಷಕರು ಭಾವುಕರಾದರು. ಆತ್ಮವಿಶ್ವಾಸವೂ ಮೂಡಿತು. ಇಲ್ಲಿಂದ ನಿರಂಜನ್‌ ನಿರಂತರವಾಗಿ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಬರ್ಲಿನ್‌ಯಿಂದ ಸಾವೋಪಾಲೊವರೆಗೂ ಅವರ ಪದಕ ಬೇಟೆ ನಿಂತಿಲ್ಲ.ಉತ್ಸಾಹ ತಣಿದಿಲ್ಲ..

ಐವಾಸ್‌ನಲ್ಲಿ ಮಿಂಚು

‘ಇಂಟರ್ ನ್ಯಾಷನಲ್ ವೀಲ್‌ ಚೇರ್ ಅಂಡ್ಆಂಪುಟಿ ಸ್ಪೋರ್ಟ್ಸ್ ಫೆಡರೇಷನ್‍ನ ಡೆಸುವ ಸ್ಪರ್ಧೆಗಳಲ್ಲಿ ನಿರಂತರ ಪದಕ ಬೇಟೆಯನ್ನು ನಿರಂಜನ್ ನಡೆಸಿದರು. 2013ರಿಂದ 2016ರವರೆಗೆ ಐವಾಸ್ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಅವರು ಸ್ಪರ್ಧಿಸಿ ಹಲವು ಪದಕಗಳನ್ನು ಗೆದ್ದಿದ್ದಾರೆ.

2013ರಲ್ಲಿ ಅಮೆರಿಕದ ಪೊರ್ಟೊರಿಕೊದಲ್ಲಿ ನಡೆದ ಐವಾಸ್ ಜೂನಿಯರ್ ವಿಶ್ವಕೂಟದಲ್ಲಿ ಎಂಟು ಪದಕ ಜಯಿಸಿದರು. ನಾಲ್ಕು ಚಿನ್ನ, ಎರಡು ಬೆಳ್ಳಿ, ಎರಡು ಕಂಚು ಅವರ ಪದಕ ಗೊಂಚಲಲ್ಲಿ ಸೇರಿದ್ದವು. ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ಐದು ಪದಕ ಜಯಿಸಿದರು.

2014ರಲ್ಲಿ ಇಂಗ್ಲೆಂಡ್‌ನ ಸ್ಟಾಕ್ ಮೆಂಡವಿಲ್ಲೆಯಲ್ಲಿ ನಡೆದ ಐವಾಸ್‌ನಲ್ಲೂ ಎಂಟು ಪದಕ ಗೆದ್ದರು. ಇದರಲ್ಲಿ ಮೂರು ಚಿನ್ನ, ಎರಡು ಬೆಳ್ಳಿ, ಮೂರು ಕಂಚಿನ ಪದಕ ಸೇರಿದ್ದವು.ಅದೇ ವರ್ಷ ದಕ್ಷಿಣ ಕೊರಿಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದರು.

2015ರಲ್ಲಿ ನೆದರ್ಲೆಂಡ್‌ನ ಸ್ಟಡ್ಸ್‌ಕ್ಯಾನಲ್‌ನಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ತಮ್ಮ ಪದಕ ಬೇಟೆಯನ್ನು ಮುಂದುವರಿಸಿದ ನಿರಂಜನ್, ಏಳು ಚಿನ್ನ, ಮೂರು ಬೆಳ್ಳಿ ಸಹಿತ 10 ಪದಕಗಳನ್ನು ಕೊರಳಿಗೇರಿಸಿಕೊಂಡರು. 2016ರ ಐವಾಸ್‌ ಜೆಕ್ ರಿಪಬ್ಲಿಕ್‌ನ ಪ್ರಾಗ್‌ನಲ್ಲಿ ನಡೆಯಿತು. ಅಲ್ಲಿ ಮತ್ತೆ ಮೂರು ಚಿನ್ನ ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕ ಗೆದ್ದರು. 2017ರಲ್ಲಿ ಅಮೆರಿಕದ ಇಂಡಿಯಾನ ಪೊಲೀಸ್‌ನಲ್ಲಿ ನಡೆದ ವಿಶ್ವ ಈಜು ಸರಣಿಯಲ್ಲಿ ಭಾಗವಹಿಸಿ ಎರಡು ಬೆಳ್ಳಿ ಗೆದ್ದರು. 2018ರಲ್ಲಿ ಜರ್ಮನಿಯಲ್ಲಿ ನಡೆದ ವಿಶ್ವ ಈಜು ಸರಣಿಯಲ್ಲಿ ಎರಡು ಬೆಳ್ಳಿ ಜಯಿಸಿದ್ದರಲ್ಲದಏಷ್ಯಾದ ಈಜುಪಟು ಮಾಡಿದ್ದ 15ವರ್ಷಗಳ ಹಿಂದಿನ ದಾಖಲೆಯನ್ನು ಮುರಿದರು.

ಬೆಂಬಿಡದ ಗಾಯ

ಹುಟ್ಟಿನಿಂದ ನಿರಂಜನ್‌ ಅವರು 16 ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. 2018ರ ಅಕ್ಟೋಬರ್‌ನಲ್ಲಿ ಮತ್ತೆ ಅವರಿಗೆ ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು. ಹೀಗಾಗಿ ಏಷ್ಯನ್ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿಲ್ಲ ಈ ಕುರಿತು ಅವರಿಗೆ ಕೊರಗು ಇತ್ತು. ನಿರಾಶರಾಗದ ನಿರಂಜನ್‌ ಮೂರೇ ತಿಂಗಳಲ್ಲಿ ಚೇತರಿಸಿಕೊಂಡು ಮತ್ತೆ 2019ರ ಫೆಬ್ರುವರಿಯಲ್ಲಿ ಸಾವೋ ಪಾಲ್‌ನಲ್ಲಿ ನಡೆದ ವಿಶ್ವ ಸರಣಿಯ ಈಜು ಸ್ಪರ್ಧೆಯಲ್ಲಿ ಎರಡು ಪದಕ ಗಳಿಸಿದ್ದಾರೆ. ಈ ಮೂಲಕ 2020ರಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ‘ಬಿ’ ಅರ್ಹತೆ ಗಿಟ್ಟಿಸಿದ್ದು, ಸೆಪ್ಟಂಬರ್‌ನಲ್ಲಿ ನಡೆಯುವ ಲಂಡನ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ.

ನಿರಂಜನ್ ಅವರ ಸಾಧನೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ 2015ರಲ್ಲಿ ಏಕಲವ್ಯ ಪ್ರಶಸ್ತಿ, 2016ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಅವರ ಕ್ರೀಡಾ ಜೀವನಕ್ಕೆ ಬೆಂಬಲವಾಗಿ ‘ಗೋ ಸ್ಪೋರ್ಟ್ಫೌಂಡೇಷನ್’ ನಿಂತಿದೆ. ಕೋಚ್‌ ಕ್ರಿಸ್ಟೋಫರ್‌ ಇಂದಿಗೂ ತರಬೇತಿ ನೀಡುತ್ತಿದ್ದಾರೆ. ಪೋಷಕರು ಸದಾ ಪ್ರೋತ್ಸಾಹಿಸುತ್ತಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಗುರಿ ಸಾಧನೆಗೆ ನಿರಂಜನ್‌ ನಿರಂತರ ಅಭ್ಯಾಸ ನಡೆಸುತ್ತಿದ್ದಾರೆ.

**

ಟೋಕಿಯೊಪ್ಯಾರಾಲಿಂಪಿಕ್ಸ್ನಲ್ಲಿಚಿನ್ನಗೆಲ್ಲುವುದಕ್ಕಾಗಿಅಭ್ಯಾಸನಡೆಸಿದ್ದೇನೆ.ಈಗಾಗಲೇ‘ಬಿ’ಅರ್ಹತೆಪಡೆದಿದ್ದೇನೆ.ಮುಂದಿನಲಂಡನ್ವಿಶ್ವಈಜುಚಾಂಪಿಯನ್ಷಿಪ್ನಲ್ಲಿಪದಕಗೆದ್ದರೆ.ಟೋಕಿಯೊಟಿಕೆಟ್ಸಿಗಲಿದೆ.
-ಎಂ.ನಿರಂಜನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.