
ನಿರ್ಮಲಾ
ಮೂಡುಬಿದಿರೆ (ದಕ್ಷಿಣ ಕನ್ನಡ): ಪ್ರತಿಸ್ಪರ್ಧಿಯನ್ನು ಒಂದು ಸೆಕೆಂಡು ಅಂತರದಲ್ಲಿ ಹಿಂದಿಕ್ಕಿದ ಮಂಗಳೂರು ವಿಶ್ವವಿದ್ಯಾಲಯದ ನಿರ್ಮಲಾ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ಕೂಟದ ಮಹಿಳೆಯರ 10 ಸಾವಿರ ಮೀಟರ್ಸ್ ಓಟದ ಚಿನ್ನ ತಮ್ಮದಾಗಿಸಿಕೊಂಡರು.
ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ಮುಂಜಾನೆ ನಡೆದ ಸ್ಪರ್ಧೆಯಲ್ಲಿ ನಿರ್ಮಲಾ 34 ನಿಮಿಷ 47:20 ಸೆಕೆಂಡುಗಳಲ್ಲಿ ಗುರು ತಲುಪಿದರು. ಪುಣೆಯ ಸಾವಿತ್ರಿಭಾಯಿ ಫುಲೆ ವಿವಿಯ ರವೀನಾ ವಿಜಯ್ ಗಾಯಕವಾಡ್ ಗುರಿಮುಟ್ಟಲು 34:48.7 ನಿಮಿಷ ತೆಗೆದುಕೊಂಡರು. ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ವಿವಿ ಅಂಜಲಿ ದೇವಿ ಕಂಚಿನ ಪದಕ ಗಳಿಸಿದರು.
ಚಾಂಪಿಯನ್‌ಷಿಪ್‌ನ ಮೊದಲ ಸ್ಪರ್ಧೆ, ಪುರುಷರ 10ಸಾವಿರ ಮೀಟರ್ಸ್ ಓಟದ ಚಿನ್ನ ಉತ್ತರಪ್ರದೇಶದ ಮಹಾತ್ಮ ಜ್ಯೋತಿಬಾ ಫುಲೆ ವಿವಿಯ ಪಾಲಾಯಿತು. 29 ನಿಮಿಷ 19:46 ಸೆಕೆಂಡುಗಳಲ್ಲಿ ಗುರಿ ತಲುಪಿದ ಗೌರವ್ ಚಿನ್ನದ ನಗೆ ಬೀರಿದರು. ರೋಹ್ಟಕ್‌ನ ಎಂ.ಡಿ ವಿವಿಯ ಅವಕಾಶ್ (29:19.91) ಬೆಳ್ಳಿ ಮತ್ತು ಆದಿಕವಿ ಶ್ರೀ ಮಹರ್ಷಿ ವಿವಿಯ ಪ್ರಿನ್ಸ್‌ರಾಜ್ ಯಾದವ್ ಕಂಚಿನ ಪದಕ ಗಳಿಸಿದರು.
ರಾಜಸ್ತಾನದ ಚೂರೂ ಜಿಲ್ಲೆಯ ನಿರ್ಮಲಾ ಕಳೆದ ಬಾರಿ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌ನಲ್ಲಿ ಬಿಕಾನೇರ್‌ನ ಮಹಾರಾಜ್ ಗಂಗಾಸಿಂಗ್ ವಿವಿ ಪರವಾಗಿ ಕಣಕ್ಕಿಳಿದು 5 ಸಾವಿರ ಮೀಟರ್ಸ್ ಓಟದಲ್ಲಿ ಬೆಳ್ಳಿ ಗೆದ್ದಿದ್ದರು.
‘800 ಮೀಟರ್ಸ್ ಓಡುತ್ತಿದ್ದೆ. ನಂತರ ದೀರ್ಘದೂರ ಓಟದತ್ತ ಚಿತ್ತ ಹರಿಸಿದೆ. ಆಳ್ವಾಸ್ ಕಾಲೇಜಿನಲ್ಲಿ ಕ್ರೀಡಾ ಕೋಟಾದಡಿ ಓದಲು ಅವಕಾಶ ಲಭಿಸಿದ್ದರಿಂದ ಅನುಕೂಲವಾಯಿತು’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ನಿರ್ಮಲಾ ಹೇಳಿದರು.