ಮ್ಯಾಗ್ನಸ್ ಕಾರ್ಲ್‌ಸನ್, ಡಿ.ಗುಕೇಶ್
ಸ್ಟಾವೆಂಜರ್ (ನಾರ್ವೆ): ಹಾಲಿ ವಿಶ್ವ ಚಾಂಪಿಯನ್, ಭಾರತದ ಡಿ.ಗುಕೇಶ್ ಅವರು ನಾರ್ವೆ ಚೆಸ್ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಆಘಾತ ನೀಡಿದರು.
ಸೋಲಿನ ಅಂಚಿನಿಂದ ಚತುರ ನಡೆ ಪ್ರದರ್ಶಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್, ಕ್ಲಾಸಿಕಲ್ ಆರನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕಾರ್ಲ್‌ಸನ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದರು. ಕ್ಲಾಸಿಕಲ್ ಸ್ಪರ್ಧೆಯಲ್ಲಿ ಗುಕೇಶ್ ಇದೇ ಮೊದಲ ಬಾರಿ ನಾರ್ವೆಯ ಆಟಗಾರನನ್ನು ಸೋಲಿಸಿದರು.
ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ ಕಾರ್ಲ್‌ಸನ್ ಮೇಲುಗೈ ಸಾಧಿಸಿದಂತೆ ತೋರುತ್ತಿತ್ತು. ಆದರೆ ಸಮಯದ ಅಭಾವದಲ್ಲಿ ಅವರು ತಪ್ಪು ನಡೆ ಇಟ್ಟಿದ್ದರಿಂದ ಗುಕೇಶ್‌ಗೆ ಮೇಲುಗೈ ಸಾಧಿಸಲು ದಾರಿ ಮಾಡಿಕೊಟ್ಟಿತು.
ಕಾರ್ಲ್‌ಸನ್ ಅವರಿಗೆ ತಪ್ಪಿನ ಅರಿವಾಯಿತಾರೂ ಅಷ್ಟು ಹೊತ್ತಿಗೆ ಸಮಯ ಮೀರಿತ್ತು. ಸೋಲಿನ ಆಘಾತವನ್ನು ಅರಗಿಸಿಕೊಳ್ಳಲಾಗದ ಐದು ಬಾರಿಯ ಚಾಂಪಿಯನ್ ಕಾರ್ಲ್‌ಸನ್ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಚೆಸ್ ಟೇಬಲ್ ಗುದ್ದಿ ಹತಾಶೆ ವ್ಯಕ್ತಪಡಿಸಿದರು. ಕೆಲವೇ ಕ್ಷಣಗಳ ನಂತರ ಕಾರ್ಲ್‌ಸನ್ ಅವರು ಗುಕೇಶ್ ಅವರತ್ತ ಸಾಗಿ ಬೆನ್ನು ತಟ್ಟಿ ಅಭಿನಂದಿಸಿದರು.
ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಗುಕೇಶ್, ‘ಕಾರ್ಲ್‌ಸನ್ ವಿರುದ್ಧದ ಪಂದ್ಯದಲ್ಲಿ ಅದೃಷ್ಟ ಜೊತೆ ನೀಡಿತು. ನಾನು ಸೋಲಿನ ಅಂಚಿನಲ್ಲಿದ್ದೆ. 100ರಲ್ಲಿ 99 ಬಾರಿ ಸೋಲಬಹುದಿತ್ತು. ಆದರೂ ಕಾರ್ಲ್‌ಸನ್ ಗೆಲುವನ್ನು ಕಷ್ಟಕರವಾಗಿಸಲು ಪ್ರಯತ್ನಿಸಿದ್ದೆ. ಅಂತಿಮವಾಗಿ ಅದೃಷ್ಟ ನನ್ನ ಪಾಲಾಯಿತು’ ಎಂದು ಹೇಳಿದ್ದಾರೆ.
ಈ ಗೆಲುವಿನೊಂದಿಗೆ 19 ವರ್ಷ ವಯಸ್ಸಿನ ಗುಕೇಶ್ 8.5 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿದರು. ಕಾರ್ಲ್‌ಸನ್ ಮತ್ತು ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಫ್ಯಾಬಿಯಾನೊ ಕರುವಾನಾ 9.5 ಅಂಕಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಭಾರತದ ಜಿಎಂ ಅರ್ಜುನ್ ಇರಿಗೇಶಿ (7.5) ಅವರು ‘ಆರ್ಮ್‌ಗೆಡನ್’ನಲ್ಲಿ ಚೀನಾದ ಗ್ರ್ಯಾಂಡ್‌ಮಾಸ್ಟರ್ ವೀ ಯಿ ವಿರುದ್ಧ ಗೆಲುವು ಸಾಧಿಸಿದರು. ಕರುವಾನಾ ಅವರು ‘ಆರ್ಮ್‌ಗೆಡನ್’ನಲ್ಲಿ ಅಮೆರಿಕದ ಹಿಕಾರು ನಕಮುರಾ (7.5) ಅವರನ್ನು ಮಣಿಸಿದರು.
ಜಂಟಿ ಮುನ್ನಡೆಯಲ್ಲಿ ಹಂಪಿ: ಮಹಿಳೆಯರ ವಿಭಾಗದಲ್ಲಿ ಭಾರತದ ಆರ್.ವೈಶಾಲಿ (8) ಅವರು ಸ್ವದೇಶದ ಕೋನೇರು ಹಂಪಿ (9.5) ಅವರನ್ನು ಮಣಿಸಿದರು. ಈ ಸೋಲಿನ ಹೊರತಾಗಿಯೂ ಹಂಪಿ, ಉಕ್ರೇನ್‌ನ ಅನ್ನಾ ಮುಝಿಚುಕ್ (9.5) ಅವರೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.