ADVERTISEMENT

ನಾರ್ವೆ ಚೆಸ್‌: ಪ್ರಜ್ಞಾನಂದಗೆ ಮಣಿದ ಕರುವಾನಾ

ನಾರ್ವೆ ಚೆಸ್‌: ಅಗ್ರ 10ರಲ್ಲಿ ಸ್ಥಾನ ಪಡೆದ ಪ್ರಗ್ಗು

ಪಿಟಿಐ
Published 2 ಜೂನ್ 2024, 16:20 IST
Last Updated 2 ಜೂನ್ 2024, 16:20 IST
ಆರ್‌.ಪ್ರಜ್ಞಾನಂದ. ಪಿಟಿಐ ಚಿತ್ರ
ಆರ್‌.ಪ್ರಜ್ಞಾನಂದ. ಪಿಟಿಐ ಚಿತ್ರ   

ಸ್ಟೆವೆಂಜರ್, ನಾರ್ವೆ: ಭಾರತದ ಗ್ರ್ಯಾಂಡ್ ಮಾಸ್ಟರ್‌ ಆರ್.ಪ್ರಜ್ಞಾನಂದ ಅವರು ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್‌ ಟೂರ್ನಿಯಲ್ಲಿ ವಿಶ್ವದ ಎರಡನೇ ಕ್ರಮಾಂಕದ ಅಮೆರಿಕದ ಫ್ಯಾಬಿಯಾನೊ ಕರುವಾನಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರು. ಟೂರ್ನಿಯ ಐದನೇ ಸುತ್ತಿನ ಮುಕ್ತಾಯದ ಬಳಿಕ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದರು.

ಅಮೆರಿಕದ ಹಿಕಾರು ನಕಾಮುರಾ ಅವರು ವಿಶ್ವ ಚೆಸ್‌ ಚಾಂಪಿಯನ್‌, ಚೀನಾದ ಡಿಂಗ್ ಲಿರೆನ್‌  ಅವರನ್ನು ಸೋಲಿಸಿದರು. ಇದರೊಂದಿಗೆ ನಕಾಮುರಾ (10 ಅಂಕ) ಅವರು ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ಗಿಂತ ಮುನ್ನಡೆ ಸಾಧಿಸಿದ್ದಾರೆ.

ಮ್ಯಾಗ್ನಸ್‌ ಕಾರ್ಲ್‌ಸನ್ ಅವರು ಫ್ರಾನ್ಸ್‌ನ ಅಲಿರೇಝಾ ಫಿರೋಜ್‌ ಅವರನ್ನು ಮಣಿಸಿದರು. ಇನ್ನು ಐದು ಸುತ್ತುಗಳು ಬಾಕಿ ಉಳಿದಿದ್ದು, ವಿಶ್ವದ ನಂ.1 ಆಟಗಾರ ಪ್ರಜ್ಞಾನಂದ 8.5 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಅಲಿರೇಝಾ 6.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ADVERTISEMENT

ಐದು ಅಂಕಗಳೊಂದಿಗೆ ಕರುವಾನಾ ಐದನೇ ಸ್ಥಾನದಲ್ಲಿದ್ದರೆ, ಡಿಂಗ್ ಲಿರೆನ್ ಕೇವಲ 2.5 ಅಂಕಗಳೊಂದಿಗೆ ಕಡೆಯ ಸ್ಥಾನದಲ್ಲಿದ್ದಾರೆ. 

ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಆರ್.ವೈಶಾಲಿ ಅವರ ಗೆಲುವಿನ ಓಟ ಮುಂದುವರಿಸಿದ್ದಾರೆ. ಭಾರತದ ಸ್ಪರ್ಧಿ ಚೀನಾದ ಟಿಂಗ್ಜಿ ಲೀ ವಿರುದ್ಧ ಆರ್ಮ್‌ಗೆಡನ್‌ನಲ್ಲಿ ಮೇಲುಗೈ ಸಾಧಿಸಿ, 10 ಅಂಕಗಳೊಂದಿಗೆ ಮುನ್ನಡೆ ಕಾಯ್ದುಕೊಂಡರು.

ಈ ವಿಭಿನ್ನ ಟೂರ್ನಿಯಲ್ಲಿ ಡ್ರಾ ಆದ ಪಂದ್ಯಗಳನ್ನು ‘ಆರ್ಮ್‌ಗೆಡನ್‌’ ಮಾದರಿಯಲ್ಲಿ ನಿರ್ಧರಿಸಲಾಗುತ್ತದೆ. ಈ ಮಾದರಿಯಲ್ಲಿ ಬಿಳಿ ಕಾಯಿಗಳಿಗೆ 10 ನಿಮಿಷ, ಕಪ್ಪು ಕಾಯಿಗಳನ್ನು ಆಡುವ ಆಟಗಾರನಿಗೆ 7 ನಿಮಿಷ ಇರುತ್ತದೆ. ಒಂದೊಮ್ಮೆ ಪಂದ್ಯ ಡ್ರಾ ಆದರೆ ಕಪ್ಪು ಕಾಯಿಗಳಲ್ಲಿ ಆಡುವ ಆಟಗಾರ ವಿಜೇತ ಎನಿಸುತ್ತಾನೆ.

ಕ್ಲಾಸಿಕಲ್ ಮಾದರಿ ಚೆಸ್‌ನಲ್ಲಿ ಉಕ್ರೇನ್‌ನ ಅನ್ನಾ ಮುಝಿಚುಕ್ ಅವರು ಸ್ವೀಡನ್‌ನ ಪಿಯಾ ಕ್ರಾಮ್ಲಿಂಗ್ ಅವರನ್ನು ಸೋಲಿಸಿದ್ದಾರೆ. ಭಾರತದ ಸ್ಪರ್ಧಿಗಿಂತ ಅನ್ನಾ ಒಂದು ಪಾಯಿಂಟ್‌ ಹಿಂದೆ ಇದ್ದಾರೆ.  

ಮಹಿಳಾ ವಿಶ್ವ ಚಾಂಪಿಯನ್ ಚೀನಾದ ಜು ವೆನ್‌ಜುನ್ ಅವರು ಭಾರತದ ಕೊನೇರು ಹಂಪಿ ವಿರುದ್ಧ ಐದನೇ ಗೆಲುವು ದಾಖಲಿಸಿ ಬಳಿಕ 7.5 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.   

ಲೀ ಅವರು ಆರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕ್ಲಾಮ್ಲಿಂಗ್ ಮೂರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.