ADVERTISEMENT

ಶೂಟಿಂಗ್ ಕೋಚ್‌ ಸಂಜಯ್ ಚಕ್ರವರ್ತಿ ಇನ್ನಿಲ್ಲ

ಪಿಟಿಐ
Published 4 ಏಪ್ರಿಲ್ 2021, 11:53 IST
Last Updated 4 ಏಪ್ರಿಲ್ 2021, 11:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಭಾರತದ ಖ್ಯಾತ ಶೂಟಿಂಗ್ ಕೋಚ್‌ ಸಂಜಯ್ ಚಕ್ರವರ್ತಿ (79) ಶನಿವಾರ ರಾತ್ರಿ ನಿಧನರಾದರು. 2012ರ ಲಂಡನ್‌ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗಗನ್ ನಾರಂಗ್, ಅಂಜಲಿ ಭಾರ್ಗವ್‌ ಸೇರಿದಂತೆ ಹಲವು ಪ್ರಮುಖ ಶೂಟರ್‌ಗಳಿಗೆ ಅವರು ತರಬೇತಿ ನೀಡಿದ್ದರು.

ದ್ರೋಣಾಚಾರ್ಯ ಪುರಸ್ಕೃತರಾಗಿದ್ದ ಸಂಜಯ್, ಹಲವು ಅಂತರರಾಷ್ಟ್ರೀಯ ಮಟ್ಟದ ಶೂಟರ್‌ಗಳ ವೃತ್ತಿಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

‘ಸಂಜಯ್ ಸರ್ ಎಂದೇ ಖ್ಯಾತರಾಗಿದ್ದ ಚಕ್ರವರ್ತಿ ಅವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಲ್ಲಿ ತರಬೇತಿ ಪಡೆದ ಅನೇಕರು ರಾಜೀವ್ ಗಾಂಧಿ ಖೇಲ್‌ರತ್ನ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ‘ ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್ಆರ್‌ಎಐ) ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಸಂಜಯ್ ಅವರ ನಿಧನದ ಸುದ್ದಿಯನ್ನು ಟ್ವಿಟರ್ ಮೂಲಕ ಮೊದಲು ಬಹಿರಂಗಪಡಿಸಿದ್ದು ಒಲಿಂಪಿಯನ್ ಶೂಟರ್ ಜಾಯದೀಪ್ ಕರ್ಮಾಕರ್‌.

ಭಾರತ ರೈಫಲ್ ತಂಡದ ಹೈ ಪರ್ಫಾರ್ಮನ್ಸ್ ಕೋಚ್ ಸುಮಾ ಶಿರೂರು ಅವರು ಸಂಜಯ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ,

‘ನಿಜವಾದ ದ್ರೋಣಾಚಾರ್ಯರನ್ನು ಕಳೆದುಕೊಂಡ ದುಃಖವಾಗುತ್ತಿದೆ. ನಾನೂ ಸೇರಿದಂತೆ ಹಲವು ‘ಅರ್ಜುನ‘ರನ್ನು ರೂಪಿಸಿದ್ದರು. ಅವರು ಎಂದಿಗೂ ಗುರುದಕ್ಷಿಣೆ ಕೇಳಲಿಲ್ಲ. ಭಾರತದ ಶೂಟಿಂಗ್ ಕ್ರೀಡೆಯು ತನ್ನ ಪ್ರಮುಖ ಪ್ರವರ್ತಕರೊಬ್ಬರನ್ನು ಕಳೆದುಕೊಂಡಿದೆ‘ ಎಂದು ಸುಮಾ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.