ADVERTISEMENT

ಡೈಮಂಡ್‌ ಲೀಗ್‌ ಫೈನಲ್ಸ್ ಮೇಲೆ ಚಿತ್ತ: ನೀರಜ್‌

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 13:12 IST
Last Updated 27 ಆಗಸ್ಟ್ 2022, 13:12 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ನವದೆಹಲಿ (ಪಿಟಿಐ): ‘ಮುಂದಿನ ತಿಂಗಳು ಜೂರಿಕ್‌ನಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವುದೇ ನನ್ನ ಗುರಿ’ ಎಂದು ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಹೇಳಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ ಲಾಸನ್‌ನಲ್ಲಿ ಶುಕ್ರವಾರ ನಡೆದ ಡೈಮಂಡ್‌ ಲೀಗ್‌ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ನೀರಜ್‌ ಅವರು ಜೂರಿಕ್‌ನಲ್ಲಿ ಸೆ.7 ಮತ್ತು 8 ರಂದು ನಡೆಯುವ ಫೈನಲ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. 2023ರ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೂ ಅರ್ಹತೆ ಗಳಿಸಿದ್ದಾರೆ.

ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಕೂಟದಲ್ಲಿ ಪಾಲ್ಗೊಂಡಿದ್ದ ನೀರಜ್‌ 89.04 ಮೀ. ಸಾಧನೆಯೊಂದಿಗೆ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದರು. ಜೆಕ್‌ ರಿಪಬ್ಲಿಕ್‌ನ ಯಾಕುಬ್‌ ವಾದ್ಲೇಖ್ (85.88 ಮೀ.) ಎರಡನೇ ಸ್ಥಾನ ಹಾಗೂ ಅಮೆರಿಕದ ಕರ್ಟಿಸ್‌ ಥಾಂಪ್ಸನ್‌ (83.72 ಮೀ.) ಮೂರನೇ ಸ್ಥಾನ ಗಳಿಸಿದ್ದರು.

ADVERTISEMENT

ಡೈಮಂಡ್‌ ಲೀಗ್‌ ಸ್ಪರ್ಧೆಯಲ್ಲಿ ಗೆದ್ದ ಭಾರತದ ಮೊದಲ ಅಥ್ಲೀಟ್‌ ಎಂಬ ಗೌರವ ಪಡೆದ ನೀರಜ್‌, ‘ತೊಡೆಯ ಸ್ನಾಯು ಸೆಳೆತದ ಕಾರಣ ಕಾಮನ್‌ವೆಲ್ತ್‌ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ. ಈ ಋತುವಿನಲ್ಲಿ ಯಾವುದೇ ಕೂಟದಲ್ಲಿ ಪಾಲ್ಗೊಳ್ಳಲು ಆಗದು ಎಂದು ಭಾವಿಸಿದ್ದೆ. ಆದರೆ ಈಗ ನೋವಿನ ಅನುಭವ ಆಗುತ್ತಿಲ್ಲ. ಬೇಗನೇ ಚೇತರಿಸಿಕೊಂಡೆ’ ಎಂದಿದ್ದಾರೆ.

‘ಜೂರಿಕ್‌ ಕೂಟಕ್ಕೆ 10 ದಿನಗಳಷ್ಟೇ ಬಾಕಿಯಿವೆ. ಹೆಚ್ಚಿನ ಸಿದ್ಧತೆಗೆ ಸಮಯ ಇಲ್ಲ. ಮತ್ತೆ ಗಾಯದ ಸಮಸ್ಯೆ ಎದುರಿಸದೆ ಈ ಋತುವಿಗೆ ತೆರೆ ಎಳೆಯುವುದು ನನ್ನ ಗುರಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.