ನವದೆಹಲಿ: ಜರ್ಮನಿಯಲ್ಲಿ ಮೇ 16ರಿಂದ 27ರವರೆಗೆ ನಡೆಯಲಿರುವ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್‌ಗೆ ಪ್ಯಾರಿಸ್ ಒಲಿಂಪಿಯನ್ ರೈಜಾ ದಿಲ್ಲೋನ್ ಸೇರಿದಂತೆ 36 ಸದಸ್ಯರ ಭಾರತ ತಂಡವನ್ನು ಭಾರತ ರೈಫಲ್ ಸಂಸ್ಥೆ ಗುರುವಾರ ಪ್ರಕಟಿಸಿದೆ.
ಮೂರು ಮಿಶ್ರ ತಂಡ ಸೇರಿದಂತೆ ಒಟ್ಟು 15 ಸ್ಪರ್ಧಾ ವಿಭಾಗಗಳಲ್ಲಿ ಭಾರತದ ಶೂಟರ್‌ಗಳು ಭಾಗವಹಿಸಲಿದ್ದಾರೆ.
12 ಸದಸ್ಯರ ಶಾಟ್‌ಗನ್ ತಂಡದಲ್ಲಿ ಧಿಲ್ಲೋನ್ ಸೇರಿದ್ದಾರೆ. ಪೆರುವಿನಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮುಕೇಶ್ ನೆಲಾವಲಿ ಮತ್ತು ದಿವಾಂಶಿ ಅವರೂ ತಂಡದಲ್ಲಿದ್ದಾರೆ. ಮುಕೇಶ್ ಐದು ಚಿನ್ನ ಮತ್ತು ಕಂಚಿನ ಪದಕ ಗೆದ್ದಿದ್ದರೆ, ದಿವಾಂಶಿ ಮಹಿಳೆಯರ 25 ಮೀಟರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಸೇರಿದಂತೆ ಎರಡು ಚಿನ್ನದ ಸಾಧನೆ ಮಾಡಿದ್ದರು.
ಅಕ್ಟೋಬರ್‌ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವು 13 ಚಿನ್ನ ಗೆದ್ದು ಅಗ್ರಸ್ಥಾನ ಪಡೆದಿತ್ತು. ಇದೀಗ ಮತ್ತೊಂದು ವಿಶ್ವವೇದಿಕೆಯಲ್ಲಿ ಪ್ರಾಬಲ್ಯವನ್ನು ಮುಂದುವರಿಸಲು ಭಾರತ ಶೂಟರ್‌ಗಳು ಸಿದ್ಧರಾಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.