ADVERTISEMENT

ಒಲಿಂಪಿಯನ್ ಅಥ್ಲೀಟ್‌ ಜಗಮೋಹನ್ ಇನ್ನಿಲ್ಲ

ಪಿಟಿಐ
Published 17 ನವೆಂಬರ್ 2020, 15:29 IST
Last Updated 17 ನವೆಂಬರ್ 2020, 15:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಟಿಯಾಲ: ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಹರ್ಡಲ್ಸ್‌ ಪಟು ಹಾಗೂ ಕ್ರೀಡೆಯಲ್ಲಿ ವೈಜ್ಞಾನಿಕ ವಿಧಾನದ ಫಿಟ್‌ನೆಸ್ ತರಬೇತಿಯನ್ನು ಜಾರಿಗೊಳಿಸಿದ ಜಗಮೋಹನ್ ಸಿಂಗ್‌ ಹೃದಯಾಘಾತದಿಂದ ಮಂಗಳವಾರ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕ್ರೀಡಾ ಶಿಕ್ಷಕ, ಕೋಚ್‌, ಆಡಳಿತಗಾರ ಮತ್ತು ಟ್ರೇನರ್ ಆಗಿ ಅವರು ಕಾರ್ಯನಿರ್ವಹಿಸಿದ್ದಾರೆ.

1958ರಿಂದ ಮೂರು ವರ್ಷ ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಜಗಮೋಹನ್ 1960ರಲ್ಲಿ ರೋಮ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. 110 ಮೀಟರ್ಸ್ ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನೂ ಬರೆದಿದ್ದರು. ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (ಎನ್‌ಐಎಸ್‌) ಅನೇಕ ವರ್ಷ ಕಾರ್ಯನಿರ್ವಹಿಸಿದ್ದ ಅವರು ತರಬೇತಿಯಲ್ಲಿ ಸುಧಾರಣೆ ತರಲು ಹೆಜ್ಜೆ ಇಟ್ಟಿದ್ದರು. ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಜಂಟಿ ಮಹಾನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಬಿಎಸ್‌ಸಿ ಪದವಿ ಮುಗಿಸಿದ ನಂತರ 10 ವರ್ಷ ಪಂಜಾಬ್ ಪೊಲೀಸ್‌ನಲ್ಲಿ ಸೇವೆ ಸಲ್ಲಿಸಿದ್ದ ಜಗಮೋಹನ್ 1956ರಲ್ಲಿ ಭಾರತೀಯ ಅಮೆಚೂರ್ ಅಥ್ಲೆಟಿಕ್‌ ಫೆಡರೇಷನ್‌ನ ಕೋಚಿಂಗ್ ಕೋರ್ಸ್ ಪೂರ್ಣಗೊಳಿಸಿದ ನಂತರ 1962ರಲ್ಲಿ ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆ ಸೇರಿದ್ದರು. 1990ರ ವರೆಗೆ ಎನ್‌ಐಎಸ್‌ನಲ್ಲಿ ಕಾರ್ಯನಿರ್ವಹಿಸಿದ ನಂತರ ಮೂರು ವರ್ಷ ಪಂಜಾಬ್ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ನಿರ್ದೇಶಕರಾಗಿದ್ದರು.

ADVERTISEMENT

1965ರಲ್ಲಿ ವೆಸ್ಟ್ ಜರ್ಮನಿ ವಿಶ್ವವಿದ್ಯಾಲಯದಲ್ಲಿ ದೈಹಿಕ ಫಿಟ್‌ನೆಸ್ ಮತ್ತು ಸ್ಪೋರ್ಟ್ಸ್ ಕಂಡೀಷನಿಂಗ್‌ ವಿಷಯದಲ್ಲಿ ವಿಶೇಷ ಪದವಿ ಪಡೆದುಕೊಂಡ ಜಗಮೋಹನ್ ಎನ್‌ಐಎಸ್‌ನಲ್ಲಿ ವೈಜ್ಞಾನಿಕ ವಿಧಾನದ ತರಬೇತಿಯನ್ನು ಜಾರಿಗೊಳಿಸಿದರು. 20 ವರ್ಷ ರಾಷ್ಟ್ರೀಯ ಶಿಬಿರಗಳಲ್ಲಿ ಸ್ಪ್ರಿಂಟರ್‌ಗಳು ಮತ್ತು ಹರ್ಡಲರ್‌ಗಳಿಗೆ ತರಬೇತಿ ನೀಡಿದ್ದ ಅವರು 1966ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು 1975ರ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡ ಭಾರತ ತಂಡದ ಮುಖ್ಯ ಕೋಚ್ ಆಗಿದ್ದರು.

1973ರಲ್ಲಿ ಭಾರತ ಹಾಕಿ ತಂಡದ ಫಿಟ್‌ನೆಸ್ ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ದೈಹಿಕ ಕಂಡೀಷನಿಂಗ್‌ನಲ್ಲಿ ಅಲ್ಲೂ ವೈಜ್ಞಾನಿಕ ವಿಧಾನವನ್ನು ಜಾರಿಗೆ ತಂದಿದ್ದರು. ಹೀಗಾಗಿ 1976ರ ಮಾಂಟ್ರಿಯಲ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದೊಂದಿಗೆ ತೆರಳಲು ಅವಕಾಶ ಲಭಿಸಿತ್ತು. 2001ರಲ್ಲಿ ಭಾರತ ಸೈಕ್ಲಿಂಗ್ ಫೆಡರೇಷನ್‌ಗೂ ಸಲಹೆಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.