ADVERTISEMENT

ಕ್ರೀಡಾಗ್ರಾಮದಲ್ಲಿ ಹೆಚ್ಚಿದ ಆತಂಕ: ಫುಟ್‌ಬಾಲ್ ಆಟಗಾರರು, ಐಒಸಿ ಸದಸ್ಯರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 13:50 IST
Last Updated 18 ಜುಲೈ 2021, 13:50 IST
ಟೋಕಿಯೊ ಕ್ರೀಡಾಗ್ರಾಮದ ವಿಹಂಗಮ ನೋಟ –ಪಿಟಿಐ ಚಿತ್ರ
ಟೋಕಿಯೊ ಕ್ರೀಡಾಗ್ರಾಮದ ವಿಹಂಗಮ ನೋಟ –ಪಿಟಿಐ ಚಿತ್ರ   

ಟೋಕಿಯೊ: ಕರ್ತವ್ಯದಲ್ಲಿದ್ದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಕಾಣಿಸಿಕೊಂಡ ಕ್ರೀಡಾಗ್ರಾಮದಲ್ಲಿ ಭಾನುವಾರ ಇನ್ನಷ್ಟು ಸೋಂಕಿನ ಪ್ರಕರಣಗಳು ದೃಢವಾಗಿವೆ. ಜಪಾನ್ ಪ್ರವೇಶಿಸಿರುವ ಇತರ ಕೆಲವರಲ್ಲೂ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಒಲಿಂಪಿಕ್ಸ್‌ ಸುತ್ತ ಮತ್ತಷ್ಟು ಆತಂಕದ ಕಾರ್ಮೋಡ ಕವಿದಿದೆ.

ಉದ್ಘಾಟನಾ ಸಮಾರಂಭಕ್ಕೆ ನಾಲ್ಕು ದಿನಗಳು ಬಾಕಿ ಇರುವಾಗ ಕ್ರೀಡಾಗ್ರಾಮದಲ್ಲಿ ಇಬ್ಬರು ಕ್ರೀಡಾಪಟುಗಳಿಗೆ ಮತ್ತು ತಂಡವೊಂದರ ಜೊತೆ ಬಂದಿದ್ದ ಅಧಿಕಾರಿಗೂ ಕೋವಿಡ್‌ ದೃಢವಾಗಿದೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಶನಿವಾರ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಅವರು ಕೆಲಸ ಮಾಡುತ್ತಿದ್ದ ಕಟ್ಟಡದಲ್ಲಿ ವಾಸ್ತವ್ಯವಿದ್ದವರ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ.

ಈ ನಡುವೆದಕ್ಷಿಣ ಕೊರಿಯಾದವರಾದ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯರೊಬ್ಬರಲ್ಲೂ ಸೋಂಕು ಪತ್ತೆಯಾಗಿದೆ. 2004ರ ಒಲಿಂಪಿಕ್ಸ್‌ನ ಟೇಬಲ್ ಟೆನಿಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ರುಯೂ ಸೆಂಗ್ ಮಿನ್ ಅವರನ್ನು ಜಪಾನ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢವಾಗಿದೆ. ಅವರನ್ನು ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ ಎಂದು ವಕ್ತಾರ ಮಾಸಾ ತಕಾಯ ತಿಳಿಸಿದ್ದಾರೆ. ಕ್ರೀಡಾಕೂಟಕ್ಕೆ ಸಂಬಂಧಿಸಿದವರಲ್ಲಿ ಈ ತಿಂಗಳು ಒಟ್ಟು 55 ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಜಪಾನ್ ತಲುಪಿರುವ ದಕ್ಷಿಣ ಆಫ್ರಿಕಾ ಫುಟ್‌ಬಾಲ್ ತಂಡದ ಇಬ್ಬರು ಆಟಗಾರರಾದ ತಬಿಸೊ ಮೊನ್ಯಾನೆ ಮತ್ತು ಕಮಯೆಲೊ ಮಲೆಟ್ಸಿ, ವಿಡಿಯೊ ಅನಲಿಸ್ಟ್‌ ಮರಿಯೊ ಮಾಶಾ ಅವರಿಗೆ ಕೋವಿಡ್ ದೃಢಪಟ್ಟಿರುವುದಾಗಿ ತಂಡದ ಮ್ಯಾನೇಜರ್ ಮಕ್ಸೊಲಿಸಿ ಸಿಬಂ ತಿಳಿಸಿದ್ದಾರೆ. ರಗ್ಬಿ ಸೆವೆನ್ಸ್‌ ತಂಡದ ಕೋಚ್ ನೀಲ್ ಪೊವೆಲ್ ಅವರಿಗೂ ಸೋಂಕು ಇರುವುದು ದೃಢಪಟ್ಟಿದೆ. ನಿರಾಶ್ರಿತರ ತಂಡದ ಉಸ್ತುವಾರಿ ತೆಗ್ಲಾ ಲೊರೊಪ್ ಕೂಡ ಕೋವಿಡ್ ಬಾಧಿತರಾಗಿರುವುದರಿಂದ ತರಬೇತಿ ಕೇಂದ್ರವಿರುವ ದೋಹಾದಿಂದ ತಂಡದ ಪ್ರವಾಸವನ್ನು ತಡೆಹಿಡಿಯಲಾಗಿದೆ.

ಆಸ್ಟ್ರೇಲಿಯಾ ತಂಡಕ್ಕೆ ಕ್ವಾರಂಟೈನ್‌

ಈ ನಡುವೆ ಆಸ್ಟ್ರೇಲಿಯಾದ ಅಥ್ಲೀಟ್ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿರುವ ಕಾರಣ ಇಡೀ ತಂಡವನ್ನೇ ಹೊರಡುವ ಮುನ್ನ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆಸ್ಟ್ರೇಲಿಯಾದ ಬ್ಯಾಸ್ಕೆಟ್‌ಬಾಲ್ ಆಟಗಾರ ಲಿಜ್ ಕ್ಯಾಂಬೇಜ್ ಅವರು ಮಾನಸಿನ ಒತ್ತಡ ನಿಭಾಯಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಕೂಟದಿಂದ ಹಿಂದೆ ಸರಿದಿದ್ದಾರೆ. ಟೆನಿಸ್ ಆಟಗಾರ ನಿಕ್ ಕಿರ್ಗಿಯೋಸ್ ಅವರು ಪ್ರೇಕ್ಷಕರಿಲ್ಲದ ಕಾರಣ ಆಡುವುದಿಲ್ಲ ಎಂದಿದ್ದಾರೆ.

ಕ್ರೀಡಾಗ್ರಾಮ ತಲುಪಿದ ಭಾರತ ತಂಡ

ಕೋವಿಡ್ ಆತಂಕದ ನಡುವೆಯೇ ಟೋಕಿಯೊಗೆ ಬಂದಿರುವ ಭಾರತದ ಮೊದಲ ತಂಡ ಕ್ರೀಡಾಗ್ರಾಮ ಪ್ರವೇಶಿಸಿದೆ. ಕ್ರೀಡಾಪಟುಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ 88 ಮಂದಿಯ ತಂಡ ಶನಿವಾರ ರಾತ್ರಿ ವಿಶೇಷ ವಿಮಾನದಲ್ಲಿ ನವದೆಹಲಿಯಿಂದ ಹೊರಟಿತ್ತು.

‘ಟೋಕಿಯೊ ವಿಮಾನನಿಲ್ದಾಣದಲ್ಲಿ ಆರು ತಾಸು ಕಾಯಬೇಕಾಗಿ ಬಂತು. ಅದು ನಿರೀಕ್ಷಿತವೇ ಆಗಿದ್ದುದರಿಂದ ಬೇಸರವೇನೂ ಆಗಲಿಲ್ಲ. ಈಗ ಕ್ರೀಡಾಗ್ರಾಮದಲ್ಲಿ ಚೆಕ್ ಇನ್ ಆಗಿದ್ದೇವೆ. ಈ ವರೆಗೆ ಎಲ್ಲವೂ ಸುಸೂತ್ರವಾಗಿ ನಡೆದಿದೆ’ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದರು.

ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧು, ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಎಂ.ಸಿ.ಮೇರಿ ಕೋಮ್, ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಬಾಕ್ಸರ್ ಅಮಿತ್ ಪಂಘಾಲ್, ವಿಶ್ವದ ಒಂದನೇ ಕ್ರಮಾಂಕದ ಆರ್ಚರ್‌ ದೀಪಿಕಾ ಕುಮಾರಿ ಮತ್ತು ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಭಾತ್ರಾ ಮೊದಲ ತಂಡದಲ್ಲಿದ್ದಾರೆ.

ಕೃತಜ್ಞತೆ ಸಲ್ಲಿಸಿದ ಕೆಂಟೊ

ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಲು ಸಜ್ಜಾಗಿರುವ ಜಪಾನ್‌ನ ಬ್ಯಾಡ್ಮಿಂಟನ್ ಪಟು ಕೆಂಟೊ ಮೊಮೊಟ ಆಯೋಜಕರಿಗೆ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. ಒಂದೂವರೆ ವರ್ಷದ ಹಿಂದೆ ಮಲೇಷ್ಯಾದ ಹೈವೇಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮೊಮೊಟ ಪ್ರಾಣಾಪಾಯದಿಂದ ಪಾರಾಗಿದ್ದರು.

ಡಿಸೆಂಬರ್‌ನಲ್ಲಿ ಜಪಾನ್‌ನಲ್ಲಿ ನಡೆದ ರಾಷ್ಟ್ರೀಯ ಟೂರ್ನಿಯಲ್ಲಿ ಸ್ಪರ್ಧಾ ಕಣಕ್ಕೆ ಮರಳಿದ್ದ ಅವರು ಜಯದೊಂದಿಗೆ ಸಂಭ್ರಮಿಸಿದ್ದರು. ಮಾರ್ಚ್‌ನಲ್ಲಿ ನಡೆದ ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರು. ಈಗ ಸಂಪೂರ್ಣ ಫಿಟ್ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.