ADVERTISEMENT

ಒಲಿಂಪಿಕ್ಸ್‌ ‘ಚಿನ್ನ’ದ ಜೋಡಿ ಕೌಶಿಕ್‌, ರವೀಂದ್ರ ಪಾಲ್ ಇನ್ನಿಲ್ಲ

ಪಿಟಿಐ
Published 8 ಮೇ 2021, 15:58 IST
Last Updated 8 ಮೇ 2021, 15:58 IST
ಹಾಕಿ
ಹಾಕಿ   

ನವದೆಹಲಿ: 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಎಂ.ಕೆ.ಕೌಶಿಕ್ ಮತ್ತು ರವೀಂದ್ರ ಪಾಲ್ ಸಿಂಗ್ ಕೋವಿಡ್‌ನಿಂದ ಶನಿವಾರ ನಿಧನರಾದರು.

60 ವರ್ಷದ ರವೀಂದ್ರ ಪಾಲ್ ಅವರನ್ನು ಎರಡು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಶನಿವಾರ ಬೆಳಿಗ್ಗೆ ಲಖನೌದಲ್ಲಿ ಕೊನೆಯುಸಿರೆಳೆದರೆ, ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ 66 ವರ್ಷದ ಕೌಶಿಕ್ ಶನಿವಾರ ಸಂಜೆ ದೆಹಲಿಯಲ್ಲಿ ಸಾವಿಗೀಡಾದರು.ಅವರಿಗೆ ಪತ್ನಿ ಮತ್ತು ಪುತ್ರ ಇದ್ದಾರೆ.

ಕೋಚ್ ಕೂಡ ಆಗಿದ್ದ ಕೌಶಿಕ್ ಭಾರತ ಪುರುಷರ ಮತ್ತು ಮಹಿಳಾ ತಂಡಗಳಿಗೆ ತರಬೇತಿ ನೀಡಿದ್ದಾರೆ. ಅವರ ಬಳಿ ಕೋಚಿಂಗ್ ಪಡೆದಿದ್ದ ಪುರುಷರ ತಂಡ 1998ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿತ್ತು. 2006ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು.

ADVERTISEMENT

2002ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾಗಿದ್ದ ಕೌಶಿಕ್ 1998ರಲ್ಲಿ ಅರ್ಜುನ ಪ್ರಶಸ್ತಿಗೂ ಪಾತ್ರರಾಗಿದ್ದರು.

ಏಪ್ರಿಲ್‌ 24ರಂದು ಸೋಂಕು ಖಚಿತಗೊಂಡ ಕಾರಣ ರವೀಂದ್ರ ಪಾಲ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚೇತರಿಸಿಕೊಂಡಿದ್ದರು. ಹೀಗಾಗಿ ಗುರುವಾರ ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಆರೋಗ್ಯ ದಿಢೀರ್‌ ಹದಗೆಟ್ಟ ಕಾರಣ ಶುಕ್ರವಾರ ವೆಂಟಿಲೇಟರ್‌ ಅಳವಡಿಸಲಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲೂ ಆಡಿದ್ದ ರವೀಂದ್ರ ಪಾಲ್, ಅವಿವಾಹಿತರಾಗಿದ್ದರು. ಕರಾಚಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ (1980, 83), 1983ರಲ್ಲಿ ಹಾಂಗ್‌ಕಾಂಗ್‌ನಲ್ಲಿ ನಡೆದ 10 ರಾಷ್ಟ್ರಗಳ ರಜತ ಮಹೋತ್ಸವ ಟೂರ್ನಿ, 1982ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಕಪ್‌ ಹಾಗೂ ಅದೇ ವರ್ಷ ಕರಾಚಿಯಲ್ಲಿ ನಡೆದ ಏಷ್ಯಾಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.