ADVERTISEMENT

ಒಲಿಂಪಿಕ್ ಅರ್ಹತೆಗೂ ಮುನ್ನ ‘ಟೆಸ್ಟ್’

ವಿಕ್ರಂ ಕಾಂತಿಕೆರೆ
Published 18 ಆಗಸ್ಟ್ 2019, 19:31 IST
Last Updated 18 ಆಗಸ್ಟ್ 2019, 19:31 IST
ಮನ್‌ದೀಪ್ ಸಿಂಗ್‌ –ಪಿಟಿಐ ಚಿತ್ರ
ಮನ್‌ದೀಪ್ ಸಿಂಗ್‌ –ಪಿಟಿಐ ಚಿತ್ರ   

ಎಂಟು ಬಾರಿಯ ಒಲಿಂಪಿಕ್ ಚಾಂಪಿಯನ್ ಭಾರತ ಹಾಕಿ ತಂಡ 1980ರಿಂದ ಈಚೆ ನೀರಸ ಸಾಮರ್ಥ್ಯ ತೋರುತ್ತ ಏಳು-ಬೀಳು ಕಂಡಿದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನೇ ಗಳಿಸದ ಭಾರತ ತಂಡ ನಂತರ 12ನೇ ಸ್ಥಾನವನ್ನೂ ಕಳೆದ ಬಾರಿ ಎಂಟನೇ ಸ್ಥಾನವನ್ನೂ ಗಳಿಸಿ ನಿರಾಸೆಗೆ ಒಳಗಾಗಿತ್ತು. ಗತವೈಭವ ಮರಳಿ ಪಡೆಯಲು ಈ ಬಾರಿ ಮರಳಿ ಯತ್ನಕ್ಕೆ ಮುಂದಾಗಿದೆ. ಅದಕ್ಕೆ ನಾಂದಿ ಹಾಡುತ್ತಿದೆ, ಹಾಕಿ ಟೆಸ್ಟ್ ಟೂರ್ನಿ.

***

‘ಕೌಂಟ್ ಡೌನ್ ಈಗಲೇ ಶುರುವಾಗಿದೆ. ಟೋಕಿಯೊ ಒಲಿಂಪಿಕ್ಸ್‌ನ ಮೊದಲ ಪಂದ್ಯ ಮತ್ತು ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಆಡಬೇಕಾದ ಪ್ರತಿ ಪಂದ್ಯದ ದಿನಾಂಕ ಮನದಲ್ಲಿ ಅಚ್ಚಾಗಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ತುದಿಗಾಲಲ್ಲಿ ನಿಂತಿದ್ದೇವೆ…’

ADVERTISEMENT

ಭಾರತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಕಳೆದ ವಾರ ಆಡಿದ ವಿಶ್ವಾಸದ ನುಡಿಗಳು ಇವು. ಬೆಂಗಳೂರಿನಲ್ಲಿ ತರಬೇತಿ ಶಿಬಿರ ಮುಗಿದ ನಂತರ ಭಾರತ ತಂಡ ಜಪಾನ್‌ಗೆ ಪ್ರಯಾಣ ಬೆಳೆಸಿದೆ. ಅಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಟೆಸ್ಟ್‌ನಲ್ಲಿ ತಂಡ ಪಾಲ್ಗೊಂಡಿದೆ.

ಅಕ್ಟೋಬರ್ 26ರಿಂದ ನವೆಂಬರ್ 3ರ ವರೆಗೆ ನಡೆಯಲಿರುವ ಒಲಿಂಪಿಕ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಉತ್ತಮ ಸಾಧನೆಯ ನಿರೀಕ್ಷೆಯ ಭಾರವನ್ನು ಹೊತ್ತುಕೊಂಡು ಪಾಲ್ಗೊಳ್ಳಲಿದೆ. ಅದಕ್ಕೂ ಮೊದಲು ನಡೆಯುವ ಟೆಸ್ಟ್‌ನ ಸವಾಲು ಮೀರುವುದು ತಂಡಕ್ಕೆ ಮಹತ್ವದ್ದಾಗಿದೆ. ಆ ಅಗ್ನಿಪರೀಕ್ಷೆಯಲ್ಲಿ ಗೆದ್ದರೆ ಅರ್ಹತಾ ಹಂತದ ಪಂದ್ಯಗಳಲ್ಲಿ ಕಣಕ್ಕೆ ಇಳಿಯುವಾಗ ಆತ್ಮಬಲ ಹೆಚ್ಚಲಿದೆ. ಇದು, ಮುಂದಿನ ವರ್ಷ ನಡೆಯಲಿರುವ ಮಹಾಕೂಟಕ್ಕೆ ಟಿಕೆಟ್ ಗಿಟ್ಟಿಸುವ ಭರವಸೆಯನ್ನು ಹೆಚ್ಚಿಸಲಿದೆ.

ಟೆಸ್ಟ್ ಟೂರ್ನಿಯಲ್ಲಿ ಮಲೇಷ್ಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳು ಈಗಾಗಲೇ ಮುಗಿದಿದ್ದು ಆತಿಥೇಯ ಜಪಾನ್ ಎದುರಿನ ಪಂದ್ಯ ನಾಳೆ (ಮಂಗಳವಾರ) ನಡೆಯಲಿದೆ.
ಬುಧವಾರ ಅಂತಿಮ ಪಂದ್ಯಕ್ಕೆ ಸಿದ್ಧವಾಗಬೇಕಿದೆ.

ಈ ಟೂರ್ನಿ ಬಿಟ್ಟರೆ ಭಾರತ ತಂಡಕ್ಕೆ ಒಲಿಂಪಿಕ್ಸ್‌ಗೆ ಸಿದ್ಧವಾಗಲು ಹೆಚ್ಚಿನ ‘ಅವಕಾಶ’ಗಳಿಲ್ಲ. ಸೆಪ್ಟೆಂಬರ್ 23ರಿಂದ ಅಕ್ಟೋಬರ್ 4 ಬೆಲ್ಜಿಯಂ ಪ್ರವಾಸ ಕೈಗೊಳ್ಳುವ ತಂಡ ನಂತರ ಅಂತರರಾಷ್ಟ್ರೀಯ ಟೂರ್ನಿಗಾಗಿ ಮುಂದಿನ ವರ್ಷದ ವರೆಗೂ ಕಾಯಬೇಕಾಗಿದೆ. ಮಾರ್ಚ್‌ ತಿಂಗಳಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಂತರ ಜುಲೈ 24ರಿಂದ ಒಲಿಂಪಿಕ್ಸ್ ಬಂದೇ ಬಿಡುತ್ತದೆ.

ಟೋಕಿಯೊ ಒಲಿಂಪಿಕ್ಸ್‌ಗೆ ಸರಿಯಾಗಿ ಒಂದು ವರ್ಷ ಉಳಿದಿದೆ. ಜಪಾನ್‌ನ ಹವಾಗುಣ, ಅಂಗಣಗಳ ಮರ್ಮ ತಿಳಿಯಲು ಮತ್ತು ಅದಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ತಂತ್ರಗಳನ್ನು ಹೆಣೆಯಲು ಈ ಟೆಸ್ಟ್ ಉತ್ತಮ ಅವಕಾಶ ಒದಗಿಸಲಿದೆ. ಆದರೆ ನಿಜವಾದ ಸವಾಲು ಇರುವುದು ಅರ್ಹತಾ ಹಂತದ ಪಂದ್ಯಗಳಲ್ಲಿ. ‘ಟೆಸ್ಟ್’ನಲ್ಲಿ ತಂಡದ ಸಾಮರ್ಥ್ಯವು ಪರೀಕ್ಷೆಗೆ ಒಳಗಾಗಲಿದೆ. ಇಲ್ಲಿ ಉತ್ತಮ ಸಾಧನೆ ತೋರಿದರೆ ಅರ್ಹತಾ ಸುತ್ತಿನಲ್ಲಿ ಸಹಜವಾಗಿ ಭರವಸೆ ಇಮ್ಮಡಿಗೊಳ್ಳಲಿದೆ.

‘ಟೆಸ್ಟ್’ನಲ್ಲಿ ಪಾಲ್ಗೊಂಡಿರುವ ತಂಡಗಳ ಪೈಕಿ ಭಾರತವೇ ಬಲಿಷ್ಠ. ವಿಶ್ವ ರಾಂಕಿಂಗ್‌ನಲ್ಲಿ ಐದನೇ ಸ್ಥಾನದಲ್ಲಿರುವ ಭಾರತದ ಎದುರಾಳಿಗಳು ನ್ಯೂಜಿಲೆಂಡ್, ಮಲೇಷ್ಯಾ ಮತ್ತು ಜಪಾನ್. ಈ ತಂಡಗಳು ಕ್ರಮವಾಗಿ 8, 12 ಹಾಗೂ 16ನೇ ಸ್ಥಾನದಲ್ಲಿವೆ.

ನವನಾಯಕ; ಯುವ ಆಟಗಾರರು

‘ಟೆಸ್ಟ್’ನಲ್ಲಿ ಭಾರತದ ಹಿರಿಯ, ಅನುಭವಿ ಆಟಗಾರರು ಪಾಲ್ಗೊಳ್ಳುತ್ತಿಲ್ಲ. ಹೆಚ್ಚಿನವರಿಗೆ ಮಹತ್ವದ ಟೂರ್ನಿಗಳಲ್ಲಿ ಪಾಲ್ಗೊಂಡ ಅನುಭವ ಇಲ್ಲ. ಪಿ.ಆರ್‌.ಶ್ರೀಜೇಶ್‌, ಮನ್‌ಪ್ರೀತ್ ಸಿಂಗ್‌, ಬೀರೇಂದ್ರ ಲಾಕ್ರ, ಆಕಾಶದೀಪ್‌ ಸಿಂಗ್‌ ಮತ್ತು ರಮಣ್‌ ದೀಪ್‌ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ನಾಯಕ, ಡ್ರ್ಯಾಗ್‌ ಫ್ಲಿಕ್ ಪರಿಣಿತ ಮತ್ತು ಡಿಫೆಂಡರ್ ಹರ್ಮನ್‌ಪ್ರೀತ್‌ ಸಿಂಗ್ ಮತ್ತು ಉಪನಾಯಕ, ಫಾರ್ವರ್ಡ್ ಆಟಗಾರ ಮನ್‌ದೀಪ್ ಸಿಂಗ್‌, ಎಸ್‌.ವಿ.ಸುನಿಲ್ ಮತ್ತು ಕೊತಾಜಿತ್‌ ಸಿಂಗ್‌ ಅವರು ಮಾತ್ರ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಕೊತಾಜಿತ್ (198 ಪಂದ್ಯಗಳು) ದ್ವಿಶತಕದ ಅಂಚಿನಲ್ಲಿದ್ದರೆ ಎಸ್‌.ವಿ.ಸುನಿಲ್ ಈಗಾಗಲೇ 250 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದಾರೆ. ಮನ್‌ದೀಪ್‌ ಸಿಂಗ್ (142) ಒಂದೂವರೆ ಶತಕದ ಅಂಚಿನಲ್ಲಿದ್ದುಹರ್ಮನ್‌ಪ್ರೀತ್‌ ಸಿಂಗ್ ಶತಕ (101) ದಾಟಿದ ಹುಮ್ಮಸ್ಸಿನಲ್ಲಿದ್ದಾರೆ. ಉಳಿದವರ ಪೈಕಿ ವರುಣ್ ಕುಮಾರ್ (74) ಅವರನ್ನು ಹೊರತುಪಡಿಸಿದರೆ 50 ಪಂದ್ಯಗಳ ಮೈಲುಗಲ್ಲು ದಾಟಿದವರು ಯಾರೂ ಇಲ್ಲ.

ಹರ್ಮನ್‌ಪ್ರೀತ್‌ ಸಿಂಗ್‌ಗೆ ನಾಯಕನಾಗಿ ಇದು ಪದಾರ್ಪಣೆ ಟೂರ್ನಿ. ಕೋಚ್‌ ಗ್ರಹಾಂ ರೀಡ್ ಅವರಿಗೂ ಅಧಿಕಾರ ವಹಿಸಿಕೊಂಡ ನಂತರದ ಮಹತ್ವದ ಮತ್ತು ಸವಾಲಿನ ಟೂರ್ನಿ ಇದು. ಯುವ ಆಟಗಾರರನ್ನು ಮುನ್ನೆಲೆಗೆ ತರಲು ಸದಾ ಹಾತೊರೆಯುತ್ತಿರುವ ಹಾಕಿ ಇಂಡಿಯಾ ಈ ‘ಟೆಸ್ಟ್‌’ನಲ್ಲಿ ಫಲಿತಾಂಶ ದಕ್ಕಿಸಿಕೊಳ್ಳುವುದೇ ಎಂಬ ಪ್ರಶ್ನೆಗೆ ಉತ್ತರವೇನು ಎಂಬ ಕುತೂಹಲ ಈಗ ಹಾಕಿ ಪ್ರಿಯರಲ್ಲಿ ಗರಿ ಗೆದರಿದೆ.

***

ಲೋಪಗಳನ್ನು ಗುರುತಿಸಿಕೊಂಡಿದ್ದೇವೆ. ಅವುಗಳನ್ನು ಸರಿಪಡಿಸಿಕೊಳ್ಳುವ ಯೋಜನೆಗಳನ್ನೂ ಹಾಕಿಕೊಂಡಿದ್ದೇವೆ. ಒಲಿಂಪಿಕ್ಸ್ ಗಿಂತ ಮುನ್ನ ಆಡಬೇಕಾಗಿರುವ ಪ್ರತಿ ಪಂದ್ಯಗಳಲ್ಲಿ ಬಳಸಬೇಕಾಗಿರುವ ನಿರ್ದಿಷ್ಟ ತಂತ್ರಗಳ ಕುರಿತು ಸ್ಪಷ್ಟ ದೂರದೃಷ್ಟಿ ತಂಡಕ್ಕಿದೆ

- ಹರ್ಮನ್ ಪ್ರೀತ್ ಸಿಂಗ್, ಭಾರತ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.