ADVERTISEMENT

Tokyo Olympics ಬ್ಯಾಡ್ಮಿಂಟನ್: ಕಾರ್ಡನ್ ಯಶಸ್ಸಿನ ಓಟಕ್ಕೆ ಆಕ್ಸೆಲ್‌ಸೆನ್‌ ತಡೆ

ಬ್ಯಾಡ್ಮಿಂಟನ್‌: ಆಕ್ಸೆಲ್‌ಸೆನ್‌ ಫೈನಲ್‌ ಎದುರಾಳಿ ಚೀನಾದ ಚೆನ್‌

ರಾಯಿಟರ್ಸ್
Published 1 ಆಗಸ್ಟ್ 2021, 8:13 IST
Last Updated 1 ಆಗಸ್ಟ್ 2021, 8:13 IST
ಆಕ್ಸೆಲ್‌ಸೆನ್‌
ಆಕ್ಸೆಲ್‌ಸೆನ್‌   

ಟೋಕಿಯೊ: ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ನಲ್ಲಿ ಕೆವಿನ್‌ ಕಾರ್ಡನ್‌ ಅವರ ಅಮೋಘ ಯಶಸ್ಸಿನ ಓಟಕ್ಕೆ ವಿಶ್ವದ ಎರಡನೇ ಕ್ರಮಾಂಕದ ಆಟಗಾರ ವಿಕ್ಟರ್‌ ಆಕ್ಸೆಲ್‌ಸೆನ್‌ ತಡೆಯೊಡ್ಡಿದರು. ಡೆನ್ಮಾರ್ಕ್‌ನ ಆಕ್ಸೆಲ್‌ಸೆನ್‌ 21–8, 21–11 ರಲ್ಲಿ ಗ್ವಾಟೆಮಾಲಾದ ಕಾರ್ಡನ್‌ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದರು.

ರಿಯೊ ಒಲಿಂಪಿಕ್ಸ್‌ ಸ್ವರ್ಣ ವಿಜೇತರಾಗಿರುವ ಚೀನಾದ ಚೆನ್‌ ಲಾಂಗ್‌ ಕೂಡ ಫೈನಲ್‌ಗೆ ಸ್ಥಾನ ಕಾದಿರಿಸಿದರು. ಚೀನಾ ಆಟಗಾರ ಚೆನ್‌ ಇನ್ನೊಂದು ಸೆಮಿಫೈನಲ್‌ನಲ್ಲಿ ಇಂಡೊನೇಷ್ಯಾದ ಆಂಥೋನಿ ಸಿನಿಸುಕ ಜಿಂಟಿಂಗ್‌ ಅವರನ್ನು 21–16, 21–11 ರಿಂದ ಸೋಲಿಸಿದರು. ಸೋಮವಾರ ಫೈನಲ್‌ ಪಂದ್ಯ ನಡೆಯಲಿದೆ.

ಆಕ್ಸೆಲ್‌ಸೆನ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಫೆವರೀಟ್ ಆಟಗಾರನಾಗಿ ಇಲ್ಲಿಗೆ ಬಂದಿದ್ದಾರೆ. ಆದರೆ 34 ವರ್ಷದ ಕಾರ್ಡನ್‌ ಸೆಮಿಫೈನಲ್‌ ತಲುಪಿದ್ದು ಹಲವರ ಹುಬ್ಬೇರಿಸಿತ್ತು. 59ನೇ ಕ್ರಮಾಂಕದ ಕಾರ್ಡನ್‌, ಈ ಹಾದಿಯಲ್ಲಿ ಮೇಲಿನ ಕ್ರಮಾಂಕದ ಆಟಗಾರರನ್ನು ಸೋಲಿಸಿದ್ದರು.

ಇಂಥ ಆಟಗಾರನ ವಿರುದ್ಧ ಆಡುವಾಗ ಸಹಜವಾಗಿ ತಮ್ಮ ಮೇಲೆಯೇ ಒತ್ತಡ ಇರುತ್ತದೆ ಎಂದು ಆಕ್ಸೆಲ್‌ಸೆನ್‌ ಹೇಳಿದ್ದರು.

‘ಇಲ್ಲಿ ಕೆವಿನ್‌ ಕಾರ್ಡನ್‌, ಭಿನ್ನ ರೀತಿಯ ಆಟಗಾರರನ್ನು ಎದುರಿಸಿದರು. ಆಕ್ಸೆಲ್‌ಸನ್‌ ತಮ್ಮೆಲ್ಲಾ ಸಾಮರ್ಥ್ಯವನ್ನು ಈ ಪಂದ್ಯಕ್ಕೆ ಮುಡಿಪಾಗಿಟ್ಟಂತೆ ಕಂಡಿತು. ಅವರು ಅಚ್ಚುಕಟ್ಟಾದ ಆಟ ಪ್ರದರ್ಶಿಸಿದರು’ ಎಂದು ಡೆನ್ಮಾರ್ಕ್‌ ತಂಡದ ಮಾಜಿ ಕೋಚ್‌ ಸ್ಟೀನ್‌ ಪೆಡರ್‌ಸನ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.