ಮಾಲ್ಡೀವ್ಸ್ ಆಟಗಾರ್ತಿ ಅಬ್ದುಲ್ ರಝಾಕ್ ಫಾತಿಮತ್ ಎದುರು ಬ್ಯಾಡ್ಮಿಂಟನ್ ‘ಎಂ’ ಗುಂಪಿನ ಪಂದ್ಯದಲ್ಲಿ ಭಾರತದ ಭಾರತದ ಪಿ.ವಿ.ಸಿಂಧು ಶಟ್ಲ್ ಹಿಂತಿರುಗಿಸಲು ಮುಂದಾಗಿರುವುದು.
ಪಿಟಿಐ ಚಿತ್ರ
ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ನಲ್ಲಿ ಮೂರನೇ ಪದಕದ ಪ್ರಯತ್ನದಲ್ಲಿರುವ ಪಿ.ವಿ.ಸಿಂಧು ಭಾನುವಾರ ಮಹಿಳೆಯರ ಸಿಂಗಲ್ಸ್ ‘ಎಂ’ ಗುಂಪಿನ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಫಾತಿಮತ್ ಅಬ್ದುಲ್ ರಝಾಕ್ ವಿರುದ್ಧ ನೇರ ಗೇಮ್‌ಗಳಲ್ಲಿ ಸುಲಭ ಗೆಲುವು ಪಡೆದರು.
ಸಿಂಧು ಅರ್ಧ ಗಂಟೆಯೊಳಗೇ ಮುಗಿದ ಪಂದ್ಯದಲ್ಲಿ ಫಾತಿಮತ್ ಅವರನ್ನು 21–9, 21–6 ರಿಂದ ಸೋಲಿಸಿದರು.
ಟೋಕಿಯೊ ಕ್ರೀಡೆಗಳಲ್ಲಿ ಕಂಚಿನ ಪದಕ ವಿಜೇತೆಯಾಗಿದ್ದ ತೈ ತ್ಸು–ಯಿಂಗ್ 21–15, 21–14 ರಿಂದ ಬೆಲ್ಜಿಯಮ್‌ನ ಲಿಯಾನ್ ತಾನ್ ಅವರನ್ನು ಸೋಲಿಸಲು ಶ್ರಮ ಹಾಕಬೇಕಾಯಿತು. ಎಡಗಾಲಿಗೆ ಪಟ್ಟಿ ಕಟ್ಟಿಕೊಂಡುಬಂದಿದ್ದ ತೈ, ಈ ಕಾಲಿನ ನೋವಿನಿಂದ ಸಿಂಗಪುರ ಟೂರ್ನಿಯಿಂದ ಹಿಂದೆಸರಿದಿದ್ದರು.
ಆದರೆ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್‌ನಲ್ಲಿ ಮೊದಲ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿದರು. ‘ಸಿ’ ಗುಂಪಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಕಿಮ್ ಸೊ ಯಿಯಾಂಗ್–ಕಾಂಗ್ ಹೀ ಯಿನ್ 21–18, 21–10 ರಿಂದ ತನಿಶಾ– ಅಶ್ವಿನಿ ಅವರಿಗೆ ಸೋಲುಣಿಸಿದರು.
ಮಹಿಳೆಯರ ಡಬಲ್ಸ್:
ಕೆಳಕ್ರಮಾಂಕದ ಅನಿರೀಕ್ಷಿತ ಫಲಿತಾಂಶದಲ್ಲಿ ಮಲೇಷ್ಯಾದ ತಿನ್ಹಾ ಮುರಳೀಧರನ್ ಮತ್ತು ಪಿಯರ್ಲಿ ತಾನ್ 18–21, 21–15, 21–16 ರಿಂದ ಜಪಾನ್‌ನ ಮಾತ್ಸುಮೊಟೊ ಮಯು– ನಾಗಹಾರಾ ವಾಕನಾ ಅವರನ್ನು ಸುಮಾರು ಒಂದು ಗಂಟೆಯ ಪಂದ್ಯದಲ್ಲಿ ಮಣಿಸಿದರು. ಜಪಾನಿನ ಆಟಗಾರ್ತಿಯರು ವಿಶ್ವ ರ್‍ಯಾಂಕಿಂಗ್‌ನಲ್ಲಿ ಎದುರಾಳಿಗಳಿಗಿಂತ ಏಳು ಕ್ರಮಾಂಕದಷ್ಟು ಮೇಲಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ, ವಿಶ್ವ ಕ್ರಮಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಲಿ ಶಿಫೆಂಗ್ (ಚೀನಾ) 21–13, 21–13 ರಿಂದ ಸ್ವಿಟ್ಜರ್ಲೆಂಡ್‌ನ ಟೊಬಿಯಾಸ್ ಕುಯೆಂಝಿ ಅವರನ್ನು ಸೋಲಿಸಿದರು. ಆದರೆ, 113ನೇ ಸ್ಥಾನದಲ್ಲಿರುವ ಕುಯೆಂಝಿ ಸುಲಭವಾಗಿ ಸೋಲುವ ಮೊದಲು ಹೋರಾಟ ನೀಡಿದರು.
ವಿಶ್ವ ಕ್ರಮಾಂಕದಲ್ಲಿ 30ನೇ ಸ್ಥಾನದಲ್ಲಿರುವ ಅಮೆರಿಕದ ವಿನ್ಸನ್ ಚಿಯು– ಜೆನ್ನಿ ಗೈ ಅವರು ಪುರುಷರ ಡಬಲ್ಸ್‌ನಲ್ಲಿ ಒಂಬತ್ತನೇ ಕ್ರಮಾಂಕದ ಚೆನ್ ತಾಂಗ್ ಜೀ ತೊ ಇ ವೀ ಅವರಿಗೆ ಸೋಲುವ ಮೊದಲು ತೀವ್ರ ಪತ್ರಿರೋಧ ತೋರಿದರು. ಅಂತಿಮವಾಗಿ ಮಲೇಷ್ಯಾದ ಜೋಡಿ 21–15, 24–22ರಲ್ಲಿ ಜಯಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.