ADVERTISEMENT

ಇನಿಯನ್‌ಗೆ ವಿಶ್ವ ಆನ್‌ಲೈನ್‌ ಓಪನ್ ಚೆಸ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 15:40 IST
Last Updated 3 ಸೆಪ್ಟೆಂಬರ್ 2020, 15:40 IST
ಇನಿಯನ್  –ಚೆಸ್‌ಬೇಸ್ ಡಾಟ್‌ ಕಾಮ್ ಚಿತ್ರ
ಇನಿಯನ್  –ಚೆಸ್‌ಬೇಸ್ ಡಾಟ್‌ ಕಾಮ್ ಚಿತ್ರ   

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್ ಪಿ. ಇನಿಯನ್ ವಿಶ್ವ ಓಪನ್ ಆನ್‌ಲೈನ್ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ತಮಿಳುನಾಡಿನ ಇನಿಯನ್ ಅವರು ಆರು ಜಯ ಮತ್ತು ಮೂರು ಡ್ರಾ ಸಾಧಿಸಿ ಅಗ್ರಸ್ಥಾನ ಗಳಿಸಿದರು. ಈ ಟೂರ್ನಿಯಲ್ಲಿ ಅವರು ಅಗ್ರಶ್ರೇಯಾಂಕದ ಗ್ರ್ಯಾಂಡ್‌ಮಾಸ್ಟರ್‌ಗಳ ಪೈಪೋಟಿಯನ್ನೂ ಎದುರಿಸಿದರು ಎಂದು ಗುರುವಾರ ಬಿಡುಗಡೆಯಾಗಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನಿಯನ್ ಅವರು ಜಾರ್ಜಿಯಾದ ಬಾದುರ್ ಜೊಬಾಬಾ, ಅಮೆರಿಕದ ಸ್ಯಾಮ್ ಸೆವಿನ್ , ಸರ್ಗೇ ಎರೆನಬರ್ಗ್‌ ಮತ್ತು ಉಕ್ರೇನ್‌ನ ನೈಜಿಕ್ ಇಲಿಯಾ ವಿರುದ್ಧದ ಪಂದ್ಯಗಳಲ್ಲಿ ಜಯಿಸಿದರು.

ADVERTISEMENT

ಇನಿಯನ್ ಮತ್ತು ಸುಗಿರೊ ಸನನ್ ಅವರು ತಲಾ 7.5 ಪಾಯಿಂಟ್ಸ್‌ ಗಳಿಸಿದರು. ಉತ್ತಮ ಟೈ ಬ್ರೇಕ್‌ ಪಾಯಿಂಟ್ಸ್‌ಗಳನ್ನು ಗಳಿಸಿದ್ದ ಇನಿಯನ್ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.

ಈ ಟೂರ್ನಿಯನ್ನು ಅಮೆರಿಕದ ಕಾಲಮಾನದ ಪ್ರಕಾರ ಆಯೋಜಿಸಲಾಗಿತ್ತು. ಅದರಿಂದಾಗಿ ಇನಿಯನ್ ಅವರು ಪ್ರತಿದಿನ ರಾತ್ರಿ 9.30 ರಿಂದ ಮಾರನೇ ದಿನದ ಬೆಳಿಗ್ಗೆ 6ರವರೆಗೆ ನಡೆಯುತ್ತಿದ್ದ ಪಂದ್ಯಗಳಲ್ಲಿ ಆಡುತ್ತಿದ್ದರು. 17 ವರ್ಷದ ಇನಿಯನ್ ಅವರು ಈ ಕಾಲಮಾನಕ್ಕೆ ತಕ್ಕಂತೆ ಆಡಲು ಬಹಳಷ್ಟು ಪೂರ್ವ ಸಿದ್ಧತೆ ಮಾಡಿಕೊಂಡಿದ್ದು ಫಲ ನೀಡಿತು. ‌

ಈ ಟೂರ್ನಿಯು ಆಗಸ್ಟ್‌ 7 ರಿಂದ 9ರವರೆಗೆ ನಡೆದಿತ್ತು. ಆದರೆ, ಫೇರ್ ಪ್ಲೇ ವಿಶ್ಲೇಷಣೆ ಮತ್ತು ಪರಿಶೀಲನೆಯನ್ನು ಕೂಲಂಕಷವಾಗಿ ನಡೆಸಿದ ನಂತರ ಈಚೆಗೆ ಫಲಿತಾಂಶವನ್ನು ಪ್ರಕಟಿಸಲಾಗಿದೆ.

‘ಇದಕ್ಕಾಗಿ ಬಹಳ ಶ್ರಮಪಟ್ಟು ಅಭ್ಯಾಸ ಮಾಡಿದ್ದೆ. ಅದರ ಫಲವಾಗಿ ಗೆಲುವು ಒಲಿದಿದೆ. ಅಲ್ಲದೇ ಶ್ರೇಷ್ಠ ಆಟಗಾರ ಬಾದುರ್ ಜೊಬಾವಾ ಅವರ ವಿರುದ್ಧ ಜಯಿಸಿದ ಪಂದ್ಯವು ನನಗೆ ಅವಿಸ್ಮರಣೀಯ’ ಎಂದು ಇನಿಯನ್ ಸಂತಸ ವ್ಯಕ್ತಪಡಿಸಿದ್ದಾರೆ.

ಟೂರ್ನಿಯಲ್ಲಿ 16 ದೇಶಗಳ 120 ಆಟಗಾರರು ಸ್ಪರ್ಧಿಸಿದ್ದರು. ಅದರಲ್ಲಿ 30ಕ್ಕೂ ಹೆಚ್ಚು ಗ್ರ್ಯಾಂಡ್‌ಮಾಸ್ಟರ್‌ಗಳಿದ್ದರು.

ಈಚೆಗೆ ನಡೆದಿದ್ದ ಆನ್‌ಲೈನ್ ಬ್ಲಿಟ್ಜ್ ಟೂರ್ನಿಯಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ ಫ್ಯಾಬಿಯಾನೊ ಕ್ಯಾರೊನಾ ವಿರುದ್ಧ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.