ADVERTISEMENT

ಟಿಟಿ: ಪಾಕಿಸ್ತಾನದ ನಿರ್ಧಾರ ಅಸ್ಪಷ್ಟ

ಪಿಟಿಐ
Published 14 ಜುಲೈ 2019, 20:21 IST
Last Updated 14 ಜುಲೈ 2019, 20:21 IST
   

ನವದೆಹಲಿ: ಕಟಕ್‌ನಲ್ಲಿ ಇದೇ 17ರಿಂದ ನಡೆಯಲಿರುವ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವುದರ ಬಗ್ಗೆ ಇನ್ನೂ ನಿರ್ಧಾರವಾಗಲಿಲ್ಲ. ನಾಲ್ಕು ಮಂದಿ ಆಟಗಾರರನ್ನು ಕಳುಹಿಸುವ ಕುರಿತು ಮಾಹಿತಿ ನೀಡಿದ್ದ ಪಾಕಿಸ್ತಾನ ಇನ್ನೂ ಈ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ ಎಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಂ.ಪಿ.ಸಿಂಗ್ ತಿಳಿಸಿದ್ದಾರೆ.

‘ನಾಲ್ವರು ಆಟಗಾರರು ಒಳ ಗೊಂಡಂತೆ ಒಟ್ಟು ಆರು ಮಂದಿಯ ತಂಡವನ್ನು ಕಳುಹಿಸುವುದಾಗಿ ಪಾಕಿಸ್ತಾನ ತಿಳಿಸಿತ್ತು. ಆದರೆ ಭಾರತದ ವಿಸಾ ಸಿಕ್ಕಿದೆಯೋ ಇಲ್ಲವೋ ಎಂಬುದರ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಲಿಲ್ಲ’ ಎಂದು ಅವರು ವಿವರಿಸಿದರು. ದೇಶದಲ್ಲಿ ನಡೆಯುವ ಯಾವುದೇ ಕ್ರೀಡಾಕೂಟದಲ್ಲಿ ಎಲ್ಲ ರಾಷ್ಟ್ರಗಳ ಆಟಗಾರರು ಪಾಲ್ಗೊಳ್ಳಲು ಅವಕಾಶ ನೀಡುವುದಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ಭಾರತ ಸರ್ಕಾರ ಕಳೆದ ತಿಂಗಳು ಭರವಸೆ ನೀಡಿತ್ತು.

ಫೆಬ್ರುವರಿಯಲ್ಲಿ ಭಾರತದಲ್ಲಿ ನಡೆದಿದ್ದ ಶೂಟಿಂಗ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಬೇಕಾಗಿದ್ದ ಪಾಕಿಸ್ತಾನದ ಶೂಟರ್‌ಗಳಿಗೆ ವಿಸಾ ನಿರಾಕರಿಸಲಾಗಿತ್ತು.

ADVERTISEMENT

ಇದರ ಪರಿಣಾಮ ಭಾರತದಲ್ಲಿ ಯಾವುದೇ ಪ್ರಮುಖ ಟೂರ್ನಿಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಐಒಸಿ ಎಚ್ಚರಿಕೆ ನೀಡಿತ್ತು. ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ಗಳು ಐಒಸಿಯ ವ್ಯಾಪ್ತಿಗೆ ಬರುವುದಿಲ್ಲವಾದರೂ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಕಿಸ್ತಾನದ ಆಟಗಾರರು ಪಾಲ್ಗೊಳ್ಳುವುದಕ್ಕೆ ಭಾರತ ನಿರ್ಬಂಧ ಹೇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.