ಕರಾಚಿ: ಭಾರತದಲ್ಲಿನ ಭದ್ರತಾ ಪರಿಸ್ಥಿತಿಯ ಪರಾಮರ್ಶೆ ನಡೆಸಿದ ನಂತರವಷ್ಟೇ ಮುಂದಿನ ತಿಂಗಳ ಏಷ್ಯಾ ಕಪ್ ಹಾಗೂ ವರ್ಷದ ಕೊನೆಯಲ್ಲಿ ನಡೆಯಲಿರುವ ಎಫ್‌ಐಎಚ್ ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಗೆ ತನ್ನ ತಂಡವನ್ನು ಕಳುಹಿಸಲು ಪಾಕಿಸ್ತಾನ ನಿರ್ಧರಿಸಿದೆ. ಈ ಎರಡೂ ಟೂರ್ನಿಗಳಿಗೆ ಭಾರತ ಆತಿಥ್ಯ ವಹಿಸಿದೆ.
ಹೀರೊ ಏಷ್ಯಾ ಕಪ್ ಹಾಕಿ ಟೂರ್ನಿಯು ಆಗಸ್ಟ್ 29 ರಿಂದ ಸೆಪ್ಟೆಂಬರ್ 7ರವರೆಗೆ ನಡೆಯಲಿದೆ. ಎಫ್‌ಐಎಚ್ ಹಾಕಿ ಜೂನಿಯರ್ ವಿಶ್ವ ಕಪ್ ಟೂರ್ನಿಯು ಚೆನ್ನೈ ಮತ್ತು ಮದುರೈನಲ್ಲಿ ನವೆಂಬರ್ 28 ರಿಂದ ಡಿಸೆಂಬರ್ 10ರವರೆಗೆ ನಡೆಯಲಿದೆ.
ಭದ್ರತೆಯ ಬಗ್ಗೆ ಕಳವಳ ಇದ್ದಲ್ಲಿ ತಂಡವನ್ನು ಕಳುಹಿಸುವುದಿಲ್ಲ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ ಭದ್ರತಾ ಕ್ರಮಗಳ ಬಗ್ಗೆ ಸಂಪೂರ್ಣ ತೃಪ್ತಿಯಾದಲ್ಲಿ ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸಲಿದೆ ಎಂದು ಪ್ರಧಾನಿಯವರ ಯುವಜನ ಅಭಿವೃದ್ಧಿ ಮತ್ತು ಕ್ರೀಡಾ ಯೋಜನೆಗಳ ಮುಖ್ಯಸ್ಥ ರಾಣಾ ಮಶೂದ್ ತಿಳಿಸಿದರು.
‘ಆಪರೇಷನ್ ಸಿಂಧೂರ್’ ನಂತರ ಪಾಕಿಸ್ತಾನದ ಪ್ರಜೆಗಳಿಗೆ ಭಾರತಕ್ಕೆ ಪ್ರಯಾಣಿಸಲು ಪರಿಸ್ಥಿತಿ ಸುರಕ್ಷಿತವಾಗಿಲ್ಲ ಎಂದರು.
ಭಾರತಕ್ಕೆ ತಂಡ ಕಳುಹಿಸುವ ಬಗ್ಗೆ ಪಾಕಿಸ್ತಾನದ ಹಾಕಿ ಫೆಡರೇಷನ್, ಸಂಬಂಧಪಟ್ಟ ಸಚಿವಾಲಯಗಳ ಸಲಹೆ ಕೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.