ADVERTISEMENT

ವಿಮಾನದಲ್ಲಿ ಸಿಗರೇಟು ಸೇದುವಾಗ ಸಿಕ್ಕಿಬಿದ್ದ ಪಾಕಿಸ್ತಾನ ಹಾಕಿ ತಂಡದ ಮ್ಯಾನೇಜರ್‌

ಪಿಟಿಐ
Published 20 ಡಿಸೆಂಬರ್ 2025, 12:58 IST
Last Updated 20 ಡಿಸೆಂಬರ್ 2025, 12:58 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಕರಾಚಿ: ಪಾಕಿಸ್ತಾನ ಹಾಕಿ ತಂಡದ  ಮ್ಯಾನೇಜರ್‌ ಅಂಜುಮ್ ಸಯೀದ್ ಅವರು ವಿಮಾನದಲ್ಲಿ ಸಿಗರೇಟು ಸೇದುವಾಗ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಅವರನ್ನು ವಿಮಾನದಿಂದ ಕೆಳಗಿಳಿಸಿದ ಘಟನೆ ರಿಯೊ ಡಿ ಜನೈರೊ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಏನಿದು ಆರೋಪ?:

ADVERTISEMENT

ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಆಡಲು ಅರ್ಜೆಂಟೀನಾಗೆ ತೆರಳಿದ್ದ ಪಾಕಿಸ್ತಾನ ಸೀನಿಯರ್‌ ಹಾಕಿ ತಂಡದೊಂದಿಗೆ ಸಯೀದ್‌ ಅವರು ಇದ್ದರು. ತಂಡವು ಅಲ್ಲಿಂದ ದುಬೈಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿತ್ತು. ಇಂಧನ ಮರುಪೂರಣಕ್ಕಾಗಿ ವಿಮಾನವನ್ನು ರಿಯೊ ಡಿ ಜನೈರೊ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಆಗ, ಸಯೀದ್‌ ಮತ್ತು ಇನ್ನೊಬ್ಬ ಆಟಗಾರ ಸಿಗರೇಟು ಸೇದಿದ್ದು, ವಿಮಾನದ ಸಿಬ್ಬಂದಿಯ ಗಮನಕ್ಕೆ ಬಂದಿದೆ.

ಗಂಭೀರ ಸುರಕ್ಷತಾ ಉಲ್ಲಂಘನೆಯ ಕಾರಣ ಇಬ್ಬರನ್ನೂ ವಿಮಾನದಿಂದ ಕೆಳಗಿಳಿಸಲಾಗಿದೆ. ಅವರನ್ನು ಅಲ್ಲಿಯೇ ಬಿಟ್ಟು ವಿಮಾನ ದುಬೈಗೆ ಹಾರಿದೆ.

ಈ ಬಗ್ಗೆ ಸ್ವತಂತ್ರ ತನಿಖೆ ಕೈಗೊಳ್ಳುವಂತೆ ಪಾಕ್‌ ಕ್ರೀಡಾ ಮಂಡಳಿಯು ‘ಪಾಕಿಸ್ತಾನ ಹಾಕಿ ಫೆಡರೇಶನ್‌’ಗೆ ಸೂಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಫೆಂಡರ್‌ ಹಾಗೂ ಮಿಡ್‌ಫೀಲ್ಡರ್‌ ಆಗಿದ್ದ ಸಯೀದ್‌ ಅವರು 1992ರ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಪಾಕ್‌ ತಂಡದಲ್ಲಿದ್ದರು. 1994ರಲ್ಲಿ ವಿಶ್ವಕಪ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿ ಗೆದ್ದಾಗಲೂ ತಂಡದ ಭಾಗವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.