ADVERTISEMENT

Paris Olympics | ತೆರೆಮರೆಯಿಂದ ಎದ್ದುಬಂದ ಸ್ವಪ್ನಿಲ್

ಒಲಿಂಪಿಕ್ಸ್: 50 ಮೀ ತ್ರಿ ಪೊಸಿಷನ್ ಶೂಟಿಂಗ್‌ನಲ್ಲಿ ಪದಕ ಗಳಿಸಿದ ಮೊದಲ ಭಾರತೀಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 0:30 IST
Last Updated 2 ಆಗಸ್ಟ್ 2024, 0:30 IST
ಸ್ವ‍ಪ್ನಿಲ್ ಕುಸಾಳೆ
ಸ್ವ‍ಪ್ನಿಲ್ ಕುಸಾಳೆ   

ಪ್ಯಾರಿಸ್: ಸ್ವಪ್ನಿಲ್ ಕುಸಾಳೆ ಅವರು ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸುವ ಅವಕಾಶಕ್ಕಾಗಿ 15 ವರ್ಷ ಕಾಯಬೇಕಾಯಿತು. 

ಮಹಾರಾಷ್ಟ್ರದ ಸ್ವಪ್ನಿಲ್ ಅವರು ಶೂಟಿಂಗ್ ಕಲಿಕೆ ಆರಂಭಿಸಿದ್ದು 2009ರಲ್ಲಿ ಅದೂ ಅವರ ತಂದದೆಯು ರಾಜ್ಯದ ಶೂಟಿಂಗ್ ತರಬೇತಿ ಕಾರ್ಯಕ್ರಮವೊಂದಕ್ಕೆ ಹೆಸರು ನೋಂದಾಯಿಸಿದ್ದರಿಂದ ಕಲಿಕೆ ಆರಂಭವಾಯಿತು. ಅದಾಗಿ ಮೂರು ವರ್ಷಗಳ ‘ಕಾಯುವಿಕೆ’ಯ ನಂತರ ಅವರು ಅಂತರರಾಷ್ಟ್ರೀಯ ಶೂಟಿಂಗ್‌ಗೆ ಪದಾರ್ಪಣೆ ಮಾಡಿದರು. 

ಇದೇ ತಿಂಗಳು 6ರಂದು 29ನೇ ವಸಂತಕ್ಕೆ ಕಾಲಿಡಲಿರುವ ಸ್ವಪ್ನಿಲ್ ಅವರು ಮಹಾರಾಷ್ಟ್ರದ ಕಂಬಳವಾಡಿಯವರು. ಒಲಿಂಪಿಕ್ಸ್‌ಗೆ ಬಂದಾಗ ಸ್ವಪ್ನಿಲ್ ಅವರು ಶತೋಹು ನಗರ (ಶೂಟಿಂಗ್ ರೇಂಜ್ ಇರುವ ತಾಣ) ಕ್ಕೆ  ಭಾರತದ ಶೂಟಿಂಗ್ ತಂಡದೊಂದಿಗೆ ಬಂದಿಳಿದಿದ್ದರು. ಅದರಲ್ಲಿ ಮನು ಭಾಕರ್, ಸಿಫ್ತ್ ಕೌರ್ ಸಮ್ರಾ ಮತ್ತು ಅರ್ಜುನ್ ಬಬುತಾ ಅವರು ಪದಕ ಜಯಿಸುವ ನಿರೀಕ್ಷೆ ಮೂಡಿಸಿದ್ದ ಪ್ರಮುಖರಾಗಿದ್ದರು.

ADVERTISEMENT

ಅದರಲ್ಲೂ 50 ಮೀ ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಅವರ ಮೇಲೆ ಅಪಾರ ನಿರೀಕ್ಷೆಗಳಿದ್ದವು. ಎರಡನೇ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಿದ್ದ ಅವರಿಗೆ ಅದೃಷ್ಟ ಒಲಿಯಲಿಲ್ಲ.  ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಸ್ವಪ್ನಿಲ್ ಅವರು ಐಶ್ವರಿಯವರನ್ನು ಅರ್ಹತಾ ಸುತ್ತಿನಲ್ಲಿಯೇ ಹಿಂದಿಕ್ಕಿದರು. ಫೈನಲ್‌ನಲ್ಲಿ ಚೀನಾ ಮತ್ತು ಉಕ್ರೇನ್ ಸ್ಪರ್ಧಿಗಳಿಗೆ ನಿಕಟ ಪೈಪೋಟಿಯೊಡ್ಡಿದರು. ಕಂಚಿನ ಪದಕ ಜಯಿಸಿದರು.  ಸದಾ ತೆರೆಮರೆಯ ಸಾಧಕನಂತೆ ಇದ್ದ ಸ್ವಪ್ನಿಲ್ ಈಗ ಇಡೀ ದೇಶದ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.

ಒಲಿಂಪಿಕ್ ಕೂಟದ 50 ಮೀ ರೈಫಲ್ 3 ಪೊಸಿಷನ್  ವಿಭಾಗದಲ್ಲಿ ಪದಕ ಜಯಿಸಿದ  ಭಾರತೀಯ ಮೊದಲ ಶೂಟರ್ ಆದರು.    ಚೀನಾದ ಯುಕುನ್ ಲಿಯು (463.6) ಹಾಗೂ ಉಕ್ರೇನ್‌ನ ಸೆರಿಯಾ ಕುಲಿಶ್ (461.3) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಜಯಿಸಿದರು. ಕುಸಾಳೆ ಅವರು 451.4 ಅಂಕ ಕಲೆಹಾಕಿದರು. 

ತ್ರಿ ಪೊಸಿಷನ್ ಶೂಟಿಂಗ್‌ ಸವಾಲಿನದ್ದಾಗಿತ್ತು. ಇದರಲ್ಲಿರುವ ಮೂರು ವಿಭಾಗಗಳಾದ ನೀಲಿಂಗ್ (ಮಂಡಿಯೂರಿ), ಪ್ರೊನ್ (ಬೋರಲಾಗಿ ಮಲಗಿ) ಹಾಗೂ ಸ್ಟ್ಯಾಂಡಿಂಗ್ (ನಿಂತುಕೊಂಡು) ಗುರಿ ಕಟ್ಟಬೇಕು. ಮೂರು ವಿಭಾಗಗಳಲ್ಲಿ ಗಳಿಸಿದ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಸ್ಕೋರ್ ಪ್ರಕಟಿಸಲಾಗುತ್ತದೆ. 

ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಅವರು ಕುಸಾಳೆಯ ನೆಚ್ಚಿನ ಆಟಗಾರ. ಧೋನಿಯವರ ಶಾಂತಚಿತ್ತ ಮತ್ತು ನಾಯಕತ್ವ ಗುಣಗಳನ್ನು ಅನುಸರಿಸುವ ಕುಶಾಲೆ ರೈಲ್ವೆ ಇಲಾಖೆಯಲ್ಲಿ ಟಿಕೆಟ್ ನಿರೀಕ್ಷಕರಾಗಿದ್ದಾರೆ. 

ಅವರು ಇಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡುತ್ತಿದ್ದಂತೆಯೇ ತವರೂರು ಕಂಬಳವಾಡಿಯಲ್ಲಿ ಸಂಭ್ರಮ ಗರಿಗೆದರಿತು. 

ಅಂಜುಮ್, ಸಿಫ್‌ಗೆ ನಿರಾಶೆ: ಮಹಿಳೆಯರ 50 ಮೀ ರೈಫರ್ 3 ಪೊಸಿಷನ್ ಸ್ಪರ್ಧೆಯಲ್ಲಿ ಭಾರತದ ಅಂಜುಮ್ ಮೌದ್ಗಿಲ್ ಮತ್ತು ಸಿಫ್ತ್‌ ಕೌರ್ ಸಮ್ರಾ ಅವರು ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲರಾದರು. 

ಪದಕ ವಿಜೇತರ ಸಂಭ್ರಮ

₹1 ಕೋಟಿ ಬಹುಮಾನ

ಮುಂಬೈ: ಪ್ಯಾರಿಸ್‌ ಒಲಿಂಪಿಕ್ಸ್‌ನ 50 ಮೀ. ರೈಫಲ್ 3 ಪೊಸಿಷನ್ಸ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸ್ವಪ್ನಿಲ್ ಕುಸಾಳೆ ಅವರಿಗೆ ಮಹಾರಾಷ್ಟ್ರ ಸರ್ಕಾರದಿಂದ ₹1 ಕೋಟಿ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಏಕನಾಥ ಶಿಂದೆ ಗುರುವಾರ ಪ್ರಕಟಿಸಿದ್ದಾರೆ.

ಕುಸಾಳೆ ಅವರ ತಂದೆ ಮತ್ತು ಕೋಚ್‌ ಜೊತೆ ಮಾನತಾಡಿದ್ದೇನೆ. ವಿಡಿಯೊ ಕಾಲ್‌ನಲ್ಲಿ ಕುಸಾಳೆಗೂ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಕುಸಾಳೆ, ಕೊಲ್ಹಾಪುರದವರು.

ಸ್ವಪ್ನಿಲ್‌ ತವರೂರಲ್ಲಿ ಸಡಗರ

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದ ಸ್ವಪ್ನಿಲ್ ಕುಸಾಳೆ ಅವರ ತವರೂರಿನಲ್ಲಿ ಸಂಭ್ರಮ ಗರಿಗೆದರಿದೆ.

ನಿಪ್ಪಾಣಿ  ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರಾಧಾನಗರಿ ತಾಲ್ಲೂಕಿನ ಕಾಂಬಳವಾಡಿ ಗ್ರಾಮದವರಾದ ಸ್ವಪ್ನಿಲ್ ಭಾರತದ ಕೀರ್ತಿಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ್ದಾರೆ.  

‘ಪ್ರಜಾವಾಣಿ’ ಜತೆಗೆ ಸಂತಸ ಹಂಚಿಕೊಂಡ ಸ್ವಪ್ನಿಲ್‌ ಅವರ ತಂದೆ, ಶಿಕ್ಷಕ ಸುರೇಶ ಕುಸಾಳೆ, ‘ನಾಸಿಕ್‌ನ ಭೋಸ್ಲಾ ಸೈನಿಕ ಶಾಲೆಯಲ್ಲಿ 9ನೇ ತರಗತಿಯಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಚಿನ್ನದ ಪದಕ ಗೆದ್ದಾಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕಂಡಿದ್ದ. ಈಗ ಅದು ನನಸಾಗಿದೆ. ಬಾಲ್ಯದಿಂದಲೂ ಅವನಿಗೆ ಕ್ರೀಡೆಯಲ್ಲಿ ಅತ್ಯಂತ ಆಸಕ್ತಿ ಇತ್ತು’ ಎಂದರು.

ಸ್ವಪ್ನಿಲ್‌ ತಾಯಿ, ಕಾಂಬಳವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೂ ಆಗಿರುವ ಅನಿತಾ, ‘ಸ್ವಪ್ನಿಲ್‌ ಪದಕ ಜಯಿಸಿದ್ದು ಸಂತಸವಾಗಿದೆ’ ಎಂದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದ ಮಹಾರಾಷ್ಟ್ರದ ಸ್ವಪ್ನಿಲ್‌ ಕುಸಾಳೆ ಅವರ ತಂದೆ ಸುರೇಶ, ತಾಯಿ ಅನಿತಾ ಹಾಗೂ ಕುಟುಂಬದವರು ಸಿಹಿ ತಿಂದು ಸಂಭ್ರಮಿಸಿದ್ದು ಹೀಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.