ADVERTISEMENT

ಪಲಕ್‌ ಗುಲಿಯಾಗೆ ಪ್ಯಾರಿಸ್ ಟಿಕಟ್

ಪಿಟಿಐ
Published 14 ಏಪ್ರಿಲ್ 2024, 16:01 IST
Last Updated 14 ಏಪ್ರಿಲ್ 2024, 16:01 IST
ಪಲಕ್ ಗುಲಿಯಾ  –ಸಂಗ್ರಹ ಚಿತ್ರ
ಪಲಕ್ ಗುಲಿಯಾ  –ಸಂಗ್ರಹ ಚಿತ್ರ   

ನವದೆಹಲಿ: ಭಾರತದ ಪಲಕ್ ಗುಲಿಯಾ ಅವರು ಇದೇ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟದ ಶೂಟಿಂಗ್‌ನಲ್ಲಿ ಸ್ಪರ್ಧಿಸಲು ರಹದಾರಿ ಗಳಿಸಿದರು. 

ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಫೈನಲ್ ಒಲಿಂಪಿಕ್ ಕ್ವಾಲಿಫಿಕೇಷನ್ ಚಾಂಪಿಯನ್‌ಷಿಪ್ (ರೈಫಲ್–ಪಿಸ್ತೂಲ್) ನಲ್ಲಿ 10 ಮೀಟರ್ಸ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಇದರೊಂದಿಗೆ ಅವರು ಒಲಿಂಪಿಕ್ಸ್ ಪ್ರವೇಶ ಪಡೆದರು.  ಭಾರತದಿಂದ ಈ ಅರ್ಹತೆ ಗಿಟ್ಟಿಸಿದ 20ನೇ ಶೂಟರ್ ಅವರಾದರು. 

ಫೈನಲ್‌ನಲ್ಲಿ ಅವರ ಆರಂಭ ನಿಧಾನವಾಗಿತ್ತು. 217.6 ಪಾಯಿಂಟ್ಸ್‌ ಗಳಿಸಿದರು. 22ನೇ ಶಾಟ್‌ನಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಮೂರನೇ ಸ್ಥಾನ ಪಡೆದರು.  ಅರ್ಮೇನಿಯಾದ ಎಲ್ಮಿರಾ ಕರಾಪೆಟಿಯಾನ್ ಚಿನ್ನ ಗೆದ್ದರು. ಥಾಯ್ಲೆಂಡಿನ ಕೆಮೊನ್‌ಲ್ಯಾಕ್ ಸೇಂಚಾ ಬೆಳ್ಳಿ ಗಳಿಸಿದರು. 

ADVERTISEMENT

ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಪಲಕ್ ಹರಿಯಾಣದ ಝಾಜರ್‌ನವರು. ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ 18 ವರ್ಷದ ಪಲಕ್ ಅವರು ವೈಯಕ್ತಿಕ ಚಿನ್ನ ಮತ್ತು ತಂಡ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದರು. 

ಭಾರತದ ಶೂಟರ್‌ಗಳು ಒಟ್ಟು 16 ಒಲಿಂಪಿಕ್ ಬರ್ತ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ದೇಶದ ಶಾಟ್‌ಗನ್ ಶೂಟರ್‌ಗಳಿಗೆ ಇನ್ನೂ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ  ಇನ್ನೂ ನಾಲ್ಕು ಸ್ಥಾನಗಳನ್ನು ಪಡೆಯುವ ಅವಕಾಶಗಳಿವೆ.  ದೋಹಾದಲ್ಲಿ ಇದೇ 19ರಿಂದ ಐಎಸ್‌ಎಸ್‌ಎಫ್‌ ಫೈನಲ್ ಒಲಿಂಪಿಕ್ ಕ್ವಾಲಿಫಿಕೇಷನ್ ಚಾಂಪಿಯನ್‌ಷಿಪ್ (ಶಾಟ್‌ಗನ್) ನಡೆಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.