
ಪ್ರೊ ಕಬಡ್ಡಿ ಲೀಗ್
ವಿಶಾಖಪಟ್ಟಣ (ಪಿಟಿಐ): ಗಗನ್ ಗೌಡ ಅವರ ಅಮೋಘ ಆಟದ ಬಲದಿಂದ ಯುಪಿ ಯೋಧಾಸ್ ತಂಡವು 12ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್ ಒಳಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಯೋಧಾಸ್ ತಂಡವು 40–35ರಿಂದ ತೆಲುಗು ಟೈಟನ್ಸ್ ಎದುರು ಜಯಿಸಿತು.
ಯೋಧಾಸ್ ತಂಡದ ಗಗನ್ ಗೌಡ ಅವರು 14 ಅಂಕಗಳನ್ನು ಗಳಿಸಿದರು. ಅದರಲ್ಲಿ 4 ಬೋನಸ್ ಅಂಕಗಳೂ ಇದ್ದವು. ಅವರ ಅಮೋಘ ಆಟದ ಮುಂದೆ ಆತಿಥೇಯ ಟೈಟನ್ಸ್ ಬಸವಳಿಯಿತು.
ಗಗನ್ ಅವರಿಗೆ ತಂಡದ ನಯಕ ಸುಮಿತ್ ಸಂಗ್ವಾನ್ ಮತ್ತು ಗುಮಾನ್ ಸಿಂಗ್ ಅವರೂ ಉತ್ತಮ ಬೆಂಬಲ ನೀಡಿದರು. ಅವರಿಬ್ಬರೂ ಕ್ರಮವಾಗಿ 8 ಮತ್ತು 7 ಅಂಕಗಳನ್ನು ಗಳಿಸಿದರು. ಇದರಿಂದಾಗಿ ತಂಡದ ಗೆಲುವಿನ ಹಾದಿ ಸುಲಭವಾಯಿತು.
ಸುಮಿತ್ ಅವರ ರಕ್ಷಣಾತ್ಮಕ ತಂತ್ರಗಾರಿಕೆಯು ಈ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರಿಗೆ ಉಪನಾಯಕ ಅಶು ಸಿಂಗ್ ಕೂಡ ಉತ್ತಮ ಬೆಂಬಲವಾಗಿ ನಿಂತರು ಸಿಂಗ್ ಅವರು 9 ಅಂಕಗಳನ್ನು ಗಳಿಸಿದರು. ಟ್ಯಾಕ್ಲಿಂಗ್‌ನಲ್ಲಿ ಸಾಮರ್ಥ್ಯ ಮೆರೆದರು.
ಟೈಟನ್ಸ್ ತಂಡದ ವಿಜಯ್ ಮಲೀಕ್ ಅವರು ಒಂದು ಹಂತದಲ್ಲಿ ಯೋಧಾಸ್‌ಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದರು. ರೇಡಿಂಗ್‌ನಲ್ಲಿ 10, ಟ್ಯಾಕಲ್‌ನಲ್ಲಿ 1 ಮತ್ತು ಮೂರು ಬೋನಸ್ ಅಂಕಗಳನ್ನು ವಿಜಯ್ ಸೂರೆ ಮಾಡಿದರು. ಒಟ್ಟು 14 ಅಂಕಗಳನ್ನು ತಂಡಕ್ಕೆ ನೀಡಿದರು. ಆದರೆ ಅವರಿಗೆ ತಂಡದ ಉಳಿದ ಆಟಗಾರರಿಂದ ತಕ್ಕ ಬೆಂಬಲ ಸಿಗಲಿಲ್ಲ. ಇದರಿಂದಾಗಿ ಎದುರಾಳಿಗಳ ಮೇಲೆ ಒತ್ತಡ ಹೇರಲು ಅವರಿಗೆ ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.