ADVERTISEMENT

ವಿಶ್ವ ಬಾಕ್ಸಿಂಗ್‌: ನಾಲ್ಕರ ಘಟ್ಟಕ್ಕೆ ಪೂಜಾ

ಪಿಟಿಐ
Published 11 ಸೆಪ್ಟೆಂಬರ್ 2025, 17:13 IST
Last Updated 11 ಸೆಪ್ಟೆಂಬರ್ 2025, 17:13 IST
ಭಾರತದ ಪೂಜಾ ರಾಣಿ (ಬಲ) ಸಂಭ್ರಮ –‘ಎಕ್ಸ್‌’ ಚಿತ್ರ
ಭಾರತದ ಪೂಜಾ ರಾಣಿ (ಬಲ) ಸಂಭ್ರಮ –‘ಎಕ್ಸ್‌’ ಚಿತ್ರ   

ಲಿವರ್‌ಪೂಲ್‌: ಭಾರತದ ಅನುಭವಿ ಬಾಕ್ಸರ್‌ ಪೂಜಾ ರಾಣಿ ಅವರು ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ 80 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು. ಅದರೊಂದಿಗೆ ಭಾರತಕ್ಕೆ ಕನಿಷ್ಠ ಮೂರು ಪದಕಗಳು ಖಚಿತವಾದವು.

34 ವರ್ಷ ವಯಸ್ಸಿನ ಪೂಜಾ ಅವರು ಬುಧವಾರ ತಡರಾತ್ರಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಪೋಲೆಂಡ್‌ನ ಎಮಿಲಿಯಾ ಕೊಟೆರ್ಸ್ಕಾ ಎದುರು 3–2ರಿಂದ ಗೆಲುವು ಸಾಧಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಪೂಜಾ ಅವರು ತಮ್ಮ ಅನುಭವವನ್ನು ಬಳಸಿ, 19 ವರ್ಷ ವಯಸ್ಸಿನ ಎಮಿಲಿಯಾ ವಿರುದ್ಧ ಮೇಲುಗೈ ಸಾಧಿಸಿದರು.

80 ಕೆ.ಜಿ. ವಿಭಾಗವು ಒಲಿಂಪಿಕ್ಸ್‌ಯೇತರ ಸ್ಪರ್ಧೆಯಾಗಿದ್ದು, 10 ಮಂದಿ ಬಾಕ್ಸರ್‌ಗಳು ಮಾತ್ರ ಕಣದಲ್ಲಿದ್ದರು. 2014ರ ಏಷ್ಯನ್‌ ಗೇಮ್ಸ್‌ ಕಂಚು ವಿಜೇತ ಪೂಜಾ ಅವರು ನಾಲ್ಕರ ಘಟ್ಟದಲ್ಲಿ ಆತಿಥೇಯ ಕಜಾಕಸ್ತಾನದ ಎಮಿಲಿ ಆಸ್ಕ್ವಿತ್‌ ಅವರ ಸವಾಲು ಎದುರಿಸಲಿದ್ದಾರೆ.

ADVERTISEMENT

ಇದಕ್ಕೂ ಮೊದಲು, ಮಹಿಳೆಯರ 57 ಕೆ.ಜಿ. ವಿಭಾಗದಲ್ಲಿ ಜಾಸ್ಮಿನ್‌ ಹಾಗೂ 80+ ಕೆ.ಜಿ. ವಿಭಾಗದಲ್ಲಿ ನೂಪುರ್ ಶೆವೊರಾನ್ ಅವರು ಸೆಮಿಫೈನಲ್‌ಗೇರಿದ್ದರು. 

ಆದರೆ, ಪುರುಷರ 65 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ಅಭಿನಾಷ್‌ ಜಾಮವಾಲ್‌ ಅವರು 1–4ರಿಂದ ಜಾರ್ಜಿಯಾದ ಲಾಶ ಗುರೂಲಿ ಎದುರು ಪರಾಭವಗೊಂಡು ಕೂಟದಿಂದ ನಿರ್ಗಮಿಸಿದರು. ಅದರೊಂದಿಗೆ, ಜಾದುಮಣಿ ಸಿಂಗ್‌ (50 ಕೆ.ಜಿ. ವಿಭಾಗ) ಹೊರತುಪಡಿಸಿ ಭಾರತದ ಉಳಿದೆಲ್ಲ ಪುರುಷ ಬಾಕ್ಸರ್‌ಗಳ ಸವಾಲು ಅಂತ್ಯಗೊಂಡಂತಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.