ADVERTISEMENT

Tata Steel Chess 2025 | ಜಂಟಿ ಮುನ್ನಡೆಯಲ್ಲಿ ಪ್ರಜ್ಞಾನಂದ, ಗುಕೇಶ್

ಟಾಟಾ ಸ್ಟೀಲ್ ಚೆಸ್‌ ಟೂರ್ನಿ

ಪಿಟಿಐ
Published 2 ಫೆಬ್ರುವರಿ 2025, 12:14 IST
Last Updated 2 ಫೆಬ್ರುವರಿ 2025, 12:14 IST
ಪ್ರಜ್ಞಾನಂದ
ಪ್ರಜ್ಞಾನಂದ   

ವಿಯ್ಕ್ ಆನ್‌ ಝೀ (ನೆದರ್ಲೆಂಡ್ಸ್): ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಟಾಟಾ ಸ್ಟೀಲ್‌ ಮಾಸ್ಟರ್ಸ್ ಚೆಸ್‌ ಟೂರ್ನಿಯ 12ನೇ ಸುತ್ತಿನಲ್ಲಿ ಜೋರ್ಡನ್ ವಾನ್‌ ಫೊರೀಸ್ಟ್‌ (ನೆದರ್ಲೆಂಡ್ಸ್‌) ಜೊತೆ ಡ್ರಾ ಮಾಡಿಕೊಂಡರೆ, ಆರ್‌.ಪ್ರಜ್ಞಾನಂದ, ಸರ್ಬಿಯಾದ ಅಲೆಕ್ಸಿ ಸರನ ಅವರನ್ನು ಸೋಲಿಸಿದರು. ಇದರಿಂದ ಭಾರತದ ಇಬ್ಬರು ಆಟಗಾರರು ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಸತತ ಮೂರನೇ ಗೆಲುವು ಸಾಧಿಸಿದ ಪ್ರಜ್ಞಾನಂದ ಟೂರ್ನಿಯು ರೋಚಕ ಹಂತಕ್ಕೆ ತಲುಪುವಂತೆ ಮಾಡಿದ್ದಾರೆ. ಭಾರತದ ಆಟಗಾರರಿಬ್ಬರೂ 8.5 ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.‌

11ನೇ ಸುತ್ತಿನವರೆಗೆ ಎರಡನೇ ಸ್ಥಾನದಲ್ಲಿದ್ದ ಉಜ್ಬೇಕಿಸ್ತಾನದ ಗ್ರ್ಯಾಂಡ್‌ಮಾಸ್ಟರ್ ನದಿರ್ಬೆಕ್ ಅಬ್ದುಸತ್ತಾರೋವ್ (7.5) ಅವರನ್ನು ಶನಿವಾರ ಭಾರತದ ಅರ್ಜುನ್ ಇರಿಗೇಶಿ ಸೋಲಿಸಿದರು. ಹೀಗಾಗಿ ಉಜ್ಬೇಕ್‌ ಆಟಗಾರನ ಪ್ರಶಸ್ತಿ ಆಸೆ ದೂರವಾಗಿದೆ.

ADVERTISEMENT

ಟೂರ್ನಿಯಲ್ಲಿ ಹಿನ್ನಡೆ ಕಾಣುತ್ತಿದ್ದ ಅರ್ಜುನ್ ಇರಿಗೇಶಿ (4.5) ಕೊನೆಯ ಹಂತದಲ್ಲಿ ಅಮೋಘ ಆಟವಾಡಿ ಜಯಗಳಿಸಿದರು. ಇದು ಅವರಿಗೆ ಟೂರ್ನಿಯಲ್ಲಿ ಮೊದಲ ಜಯ.

ಭಾರತದ ಲಿಯಾನ್ ಲ್ಯೂಕ್ ಮೆಂಡೋನ್ಸಾ ಇನ್ನೊಂದು ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಅಮೆರಿಕನ್ ಗ್ರ್ಯಾಂಡ್‌ಮಾಸ್ಟರ್ ಫ್ಯಾಬಿಯಾನೊ ಕರುವಾನ (6) ಜೊತೆ ಪಾಯಿಂಟ್ಸ್ ಹಂಚಿಕೊಂಡರು. ಪಿ.ಹರಿಕೃಷ್ಣ (6) ಮತ್ತೊಂದು ಪಂದ್ಯದಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ (5) ಜೊತೆ ಡ್ರಾ ಮಾಡಿಕೊಂಡರು.

ಅಂತಿಮ ಸುತ್ತಿನಲ್ಲಿ ಗುಕೇಶ್‌ ಅವರು ಮರಳಿಯ ಲಯ ಕಂಡುಕೊಳ್ಳುತ್ತಿರುವ ಅರ್ಜುನ್ ಇರಿಗೇಶಿ ಅವರನ್ನು ಎದುರಿಸಬೇಕಾಗಿದೆ. ಪ್ರಜ್ಞಾನಂದ ಅವರು ಕೀಮರ್ ಸವಾಲನ್ನು ಎದುರಿಸಲಿದ್ದಾರೆ. ಎರಡೂ ಪಂದ್ಯಗಳೂ ಡ್ರಾ ಆದಲ್ಲಿ ವಿಜೇತರನ್ನು ನಿರ್ಧರಿಸಲು ಅಲ್ಪಾವಧಿಯ ಟೈಬ್ರೇಕ್ ಪಂದ್ಯಗಳನ್ನು ಆಡಿಸಬೇಕಾಗುತ್ತದೆ.

ಚಾಲೆಂಜರ್ಸ್ ವಿಭಾಗದಲ್ಲಿ ಆರ್‌.ವೈಶಾಲಿ (5) ಅವರು, ಟರ್ಕಿಯ ಎಡಿಝ್ ಗುರೆಲ್ (7) ಎದುರು ಸೋಲನುಭವಿಸಿದರು. ದಿವ್ಯಾ ದೇಶಮುಖ್ (3) ಕೂಡ ನಿರಾಸೆ ಅನುಭವಿಸಿದರು. ಅವರು  ನೆದರ್ಲೆಂಡ್ಸ್‌ನ ಬೆಂಜಮಿನ್ ಬೊಕ್ (8) ಅವರಿಗೆ ಮಣಿದರು.

ಈ ವಿಭಾಗದಲ್ಲಿ ಐದಿನ್ ಸುಲೇಮಾನ್ಲಿ (ಅಜರ್‌ಬೈಜಾನ್‌), ಎನ್ಗುಯೆನ್ ಥಾಯ್‌ ದೈವಾಮ್ (ಝೆಕ್‌ ರಿಪಬ್ಲಿಕ್‌) ಮತ್ತು ಇರ್ವಿನ್ ಲಾಮಿ (ನೆದರ್ಲೆಂಡ್ಸ್) ಅವರು ತಲಾ ಎಂಟು ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.