ವಾರ್ಸಾ (ಪೋಲೆಂಡ್),: ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಅವರು ಸೂಪರ್‌ಬಿಟ್ ರ್‍ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಟೂರ್ನಿಯ ರ್‍ಯಾಪಿಡ್ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದು ಭಾರತದ ಆಟಗಾರರ ಪೈಕಿ ಉತ್ತಮ ನಿರ್ವಹಣೆ ತೋರಿದರು. ಚೀನಾದ ವೀ ಯಿ ಅತ್ಯುತ್ತಮ ಫಾರಂ ಮುಂದುವರಿಸಿ ಈ ವಿಭಾಗದಲ್ಲಿ ಶುಕ್ರವಾರ ಅಗ್ರಸ್ಥಾನ ಪಡೆದರು.
ಈ ಟೂರ್ನಿ ಗ್ರ್ಯಾಂಡ್ ಚೆಸ್ ಟೂರ್‌ನ ಭಾಗವಾಗಿದೆ. ವೀ ಯಿ, ಏಳನೇ ಸುತ್ತಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ಷಿಪ್ ಚಾಲೆಂಜರ್ ಗುಕೇಶ್ ವಿರುದ್ಧ, ಎಂಟನೇ ಸುತ್ತಿನಲ್ಲಿ ನಾಡಿರ್ಬೆಕ್ ಅಬ್ದುಸತ್ತಾರೋವ್ (ಉಜ್ಬೇಕಿಸ್ತಾನ) ವಿರುದ್ಧ ಜಯಗಳಿಸಿದರು. ಅಂತಿಮ ಸುತ್ತಿನಲ್ಲಿ ಪ್ರಜ್ಞಾನಂದ ವಿರುದ್ಧ ಡ್ರಾ ಮಾಡಿಕೊಂಡರು.
ವೀ ಯಿ 13 ಪಾಯಿಂಟ್ಸ್ ಗಳಿಸಿದರೆ, ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ 12 ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನ ಪಡೆದರು. ಜರ್ಮನಿಯ ವಿನ್ಸೆಂಟ್ ಕೀಮರ್ ಮೇಲೆ ಜಯಗಳಿಸಿದ ನಾರ್ವೆಯ ಆಟಗಾರ, ಉಳಿದೆರಡು ಪಂದ್ಯ ‘ಡ್ರಾ’ ಮಾಡಿಕೊಂಡರು.
ಹತ್ತು ಆಟಗಾರರ ಈ ಟೂರ್ನಿಯ ಅರ್ಧ ಭಾಗ ಮುಗಿಸಿದ್ದು, ಬ್ಲಿಟ್ಸ್ (ಅತಿ ವೇಗದ) ವಿಭಾಗದಲ್ಲಿ ಡಬಲ್ ರೌಂಡ್‌ರಾಬಿನ್ ಪಂದ್ಯಗಳು (ಒಟ್ಟು 18 ಪಂದ್ಯ) ನಡೆಯಲು ಬಾಕಿಯಿದ್ದು, ನಂತರವಷ್ಟೇ ವಿಜೇತರ ನಿರ್ಧಾರವಗಲಿದೆ.
ಈ ಟೂರ್ನಿ ಒಟ್ಟು ₹1.43 ಕೋಟಿ ಬಹುಮಾನ ನಿಧಿ ಹೊಂದಿದೆ.
ಅಂತಿಮ ಫಲಿತಾಂಶ (ರ‍್ಯಾಪಿಡ್): 1. ವೀ ಯಿ (13 ಪಾಯಿಂಟ್ಸ್). 2. ಮ್ಯಾಗ್ನಸ್ ಕಾರ್ಲ್‌ಸನ್ (12 ಪಾಯಿಂಟ್), 3. ಪ್ರಜ್ಞಾನಂದ (10 ಪಾಯಿಂಟ್ಸ್), 4–5: ಪೋಲೆಂಡ್‌ನ ಯಾನ್ ಕ್ರಿಸ್ಟೋಫ್ ಡೂಡ, ರುಮೇನಿಯಾದ ಕಿರಿಲ್ ಶೆವ್ಚೆಂಕೊ (9 ಪಾಯಿಂಟ್ಸ್), 6–7: ಅರ್ಜುನ್ ಇರಿಗೇಶಿ, ಅಬ್ದುಸತ್ತಾರೋವ್ (ತಲಾ 8 ಪಾಯಿಂಟ್ಸ್). 8–10: ಗುಕೇಶ್, ಹಾಲೆಂಡ್‌ನ ಅನಿಶ್ ಗಿರಿ, ವಿನ್ಸೆಂಟ್ ಕೀಮರ್ (ತಲಾ 7 ಪಾಯಿಂಟ್ಸ್).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.