ADVERTISEMENT

ಚೆಸ್: ಪ್ರಣವ್‌ಗೆ ಅಂತರರಾಷ್ಟ್ರೀಯ ಜಿಎಂ ಪಟ್ಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 2:22 IST
Last Updated 4 ಮಾರ್ಚ್ 2021, 2:22 IST
ಪ್ರಣವ್ ಆನಂದ್‌
ಪ್ರಣವ್ ಆನಂದ್‌   

ಬೆಂಗಳೂರು: ನಗರದ ಚೆಸ್‌ ಪಟು ಪ್ರಣವ್ ಆನಂದ್‌ ಅಂತರರಾಷ್ಟ್ರೀಯ ಮಾಸ್ಟರ್ (ಐಎಂ) ಆಗಿದ್ದಾರೆ. 14 ವರ್ಷ 3 ತಿಂಗಳು ಮತ್ತು 15 ದಿನಗಳಲ್ಲಿ ಈ ಪಟ್ಟ ಅಲಂಕರಿಸಿದ ಅವರು ಕರ್ನಾಟಕದ ಅತಿ ಕಿರಿಯ ಐಎಂ ಎಂದೆನಿಸಿಕೊಂಡಿದ್ದಾರೆ ಎಂದು ಯನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ (ಯುಕೆಸಿಎ) ಪ್ರಕಟಣೆಯಲ್ಲಿ ಬುಧವಾರ ತಿಳಿಸಿದೆ.

2019ರಲ್ಲಿ ರಿಲ್ಟನ್ ಕಪ್‌ನಲ್ಲಿ ಮೊದಲ ನಾರ್ಮ್‌ ಗಳಿಸಿದ ಪ್ರಣವ್‌ ಅದೇ ವರ್ಷ ಬೀಲ್ ಮಾಸ್ಟರ್ಸ್‌ ಟೂರ್ನಿಯಲ್ಲಿ ಎರಡನೇ ನಾರ್ಮ್ ಗಳಿಸಿದರು. ಕಳೆದ ವರ್ಷ ಏರೋಫ್ಲಾಟ್ ಟೂರ್ನಿಯಲ್ಲಿ ಅವರಿಗೆ ಮೂರನೇ ನಾರ್ಮ್ ಲಭಿಸಿತ್ತು. ಈ ಸಂದರ್ಭದಲ್ಲಿ ಐಎಂ ಆಗಲು ಕೇವಲ 19 ಪಾಯಿಂಟ್‌ಗಳು ಬೇಕಾಗಿದ್ದವು. ಆದರೆ ಕೋವಿಡ್‌–19ರಿಂದಾಗಿ ಒಂದು ವರ್ಷ ಯಾವ ಟೂರ್ನಿಯಲ್ಲೂ ಆಡಿರಲಿಲ್ಲ. ಈ ವರ್ಷದ ಫೆಬ್ರುವರಿಯಲ್ಲಿ ಸರ್ಬಿಯಾದ ಬಿಲ್‌ಗ್ರೇಡ್‌ನಲ್ಲಿ ನಡೆದ ರಡ್ನಿಕಿಚೆಸ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ಸ್ಟೀಫನ್ ಜೂರಿಕ್ ವಿರುದ್ಧ ಗೆದ್ದು ಅಗತ್ಯ ಪಾಯಿಂಟ್ ಕಲೆ ಹಾಕಿದ್ದರು.

ಪ್ರಣವ್‌, ಬಿಟಿಎಂ ಲೇಔಟ್‌ನ ಆನಂದ್ ಅನಂತನಾರಾಯಣ ಮತ್ತು ಸುಪರ್ಣಾ ಅವರ ಪುತ್ರ.ಮೈಸೂರಿನ ಎಲ್‌.ಶೇಷಾದ್ರಿ, ಬೆಂಗಳೂರಿನ ಚೆಸ್ ಶೂಟ್ಸ್ ಅಕಾಡೆಮಿಯ ಜಯರಾಂ ರಾಮಣ್ಣ ಮತ್ತು ದೆಹಲಿಯ ವಿಶಾಲ್ ಸರೀನ್ ಬಳಿ ತರಬೇತಿ ಪಡೆದಿರುವ ಪ್ರಣವ್ ಸದ್ಯ ವಿ.ಸರವಣನ್‌ ಅವರ ಶಿಷ್ಯ ಎಂದು ಯುಕೆಸಿಎ ಪ್ರಧಾನ ಕಾರ್ಯದರ್ಶಿ ಆರ್‌.ಹನುಮಂತ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.