ADVERTISEMENT

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌: ಅಶ್ವಿನಿ– ಸಿಕ್ಕಿರೆಡ್ಡಿಗೆ ಜಯ

ಪಿಟಿಐ
Published 15 ಡಿಸೆಂಬರ್ 2021, 12:46 IST
Last Updated 15 ಡಿಸೆಂಬರ್ 2021, 12:46 IST
ಪಂದ್ಯ ಗೆದ್ದ ಎಚ್‌.ಎಸ್‌.ಪ್ರಣಯ್ ಸಂಭ್ರಮ– ಟ್ವಿಟರ್‌ ಚಿತ್ರ
ಪಂದ್ಯ ಗೆದ್ದ ಎಚ್‌.ಎಸ್‌.ಪ್ರಣಯ್ ಸಂಭ್ರಮ– ಟ್ವಿಟರ್‌ ಚಿತ್ರ   

ಹುವೆಲ್ವಾ, ಸ್ಪೇನ್‌: ಭಾರತದ ಎಚ್‌.ಎಸ್‌. ಪ್ರಣಯ್ ಅವರು ಮಲೇಷ್ಯಾದ ಡರೆನ್‌ ಲೀವ್‌ ಸವಾಲು ಮೀರಿ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಕರ್ನಾಟಕದ ಅಶ್ವಿನಿ ಪೊನ್ನಪ್ಪ– ಎನ್‌.ಸಿಕ್ಕಿರೆಡ್ಡಿ ಕೂಡ 16ರ ಘಟ್ಟಕ್ಕೆ ಪ್ರವೇಶಿಸಿದರು.

ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿಬುಧವಾರ ಪ್ರಣಯ್‌21-7, 21-17ರಿಂದ ಡರೆನ್‌ ಅವರಿಗೆ ಸೋಲುಣಿಸಿದರು. ಕೇವಲ 42 ನಿಮಿಷಗಳಲ್ಲಿ ಆಟದಲ್ಲಿ ಭಾರತದ ಆಟಗಾರ ಸುಲಭವಾಗಿ ಗೆದ್ದು ಬೀಗಿದರು.

ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್‌ನ ಲೂಯಿಸ್ ಎನ್ರಿಕ್ ಪೆನಾಲ್ವರ್ ಮತ್ತು ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ನಡುವಿನ ಮತ್ತೊಂದು ಎರಡನೇ ಸುತ್ತಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ADVERTISEMENT

ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕಿದಂಬಿ ಶ್ರೀಕಾಂತ್‌ ಹಾಗೂ ಲಕ್ಷ್ಯ ಸೇನ್ ಈಗಾಗಲೇ 16ರ ಘಟ್ಟ ತಲುಪಿದ್ದಾರೆ.

ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿರೆಡ್ಡಿ21-11, 9-21, 21-13ರಿಂದ ಚೀನಾದ ಲಿ ಜುವಾನ್‌ ಜುವಾನ್‌ ಮತ್ತು ಜಿಯಾ ಯು ಟಿಂಗ್ ಎದುರು ಗೆದ್ದು ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. 51 ನಿಮಿಷಗಳ ಈ ಸೆಣಸಾಟದಲ್ಲಿ ಎರಡನೇ ಗೇಮ್‌ನಲ್ಲಿ ಮಾತ್ರ ಭಾರತದ ಆಟಗಾರ್ತಿಯರು ಪ್ರತಿರೋಧ ಎದುರಿಸಿದರು.

ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌– ಧೃವ ಕಪಿಲ ಜೋಡಿಗೆ ನಿರಾಸೆ ಕಾಡಿತು. ರಷ್ಯಾದ ವ್ಲಾಡಿಮಿರ್‌ ಇವಾನೊವ್‌– ಇವಾನ್ ಸೊಜೊನೊವ್‌ ಅವರು 21–11, 21–16ರಿಂದ ಭಾರತದ ಜೋಡಿಗೆ ಸೋಲುಣಿಸಿದರು.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮಂಗಳವಾರ ಪ್ರೀಕ್ವಾರ್ಟರ್‌ಫೈನಲ್‌ ತಲುಪಿದ್ದ ಪಿ.ವಿ. ಸಿಂಧು ಅವರು ಮುಂದಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಪಾರ್ನ್‌ಪವಿ ಚೊಚುವಾಂಗ್‌ ಅವರಿಗೆ ಮುಖಾಮುಖಿಯಾಗುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.