ADVERTISEMENT

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್: ಸೆಮಿಯಲ್ಲಿ ಎಡವಿದ ಪ್ರಣಯ್

ಭಾರತದ ಸವಾಲಿಗೆ ತೆರೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 12:03 IST
Last Updated 9 ಜುಲೈ 2022, 12:03 IST
ಆ್ಯಂಗಸ್‌ ಎಂಗ್‌ ಕಾ ಲಾಂಗ್ ಆಟದ ವೈಖರಿ –ಎಎಫ್‌ಪಿ ಚಿತ್ರ
ಆ್ಯಂಗಸ್‌ ಎಂಗ್‌ ಕಾ ಲಾಂಗ್ ಆಟದ ವೈಖರಿ –ಎಎಫ್‌ಪಿ ಚಿತ್ರ   

ಕ್ವಾಲಾಲಂಪುರ: ಎಚ್.ಎಸ್‌.ಪ್ರಣಯ್‌ ಅವರು ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತರು. ಇದರೊಂದಿಗೆ ಭಾರತದ ಸವಾಲಿಗೆ ತೆರೆಬಿತ್ತು.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಪ್ರಣಯ್ 21-17 9-21 17-21 ರಲ್ಲಿ ಹಾಂಕಾಂಗ್‌ನ ಆ್ಯಂಗಸ್‌ ಎಂಗ್‌ ಕಾ ಲಾಂಗ್ ಕೈಯಲ್ಲಿ ಪರಾಭವಗೊಂಡರು. ಈ ಹೋರಾಟ ಒಂದು ಗಂಟೆ ನಾಲ್ಕು ನಿಮಿಷ ನಡೆಯಿತು.

ಇವರಿಬ್ಬರು ಈ ಹಿಂದೆ ಎಂಟು ಸಲ ಎದುರಾಗಿದ್ದು, ಗೆಲುವು– ಸೋಲಿನಲ್ಲಿ 4–4 ರಲ್ಲಿ ಸಮಬಲ ಹೊಂದಿದ್ದರು. ಮಾತ್ರವಲ್ಲ, ಕೊನೆಯ ಮೂರು ಹೋರಾಟಗಳಲ್ಲಿ ಪ್ರಣಯ್‌ ಜಯಿಸಿದ್ದರು.

ADVERTISEMENT

ಭಾರತದ ಆಟಗಾರ ತುರುಸಿನ ಪೈಪೋಟಿಯ ಬಳಿಕ ಮೊದಲ ಗೇಮ್‌ ಗೆದ್ದು ಮುನ್ನಡೆ ಸಾಧಿಸಿದರು. ಆದರೆ ಎರಡು ಹಾಗೂ ಮೂರನೇ ಗೇಮ್‌ನಲ್ಲಿ ಥಾಯ್ಲೆಂಡ್‌ನ ಸ್ಪರ್ಧಿ ಅತ್ಯುತ್ತಮ ಆಟವಾಡಿದರು. ಜಂಪ್‌ ಸ್ಮ್ಯಾಷ್‌ ಮತ್ತು ಡ್ರಾಪ್‌ ಶಾಟ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಆ್ಯಂಗಸ್‌ ಅವರು ಎರಡನೇ ಗೇಮ್‌ನ ಆರಂಭದಲ್ಲೇ ಆರು ಪಾಯಿಂಟ್‌ಗಳ ಮುನ್ನಡೆ ಗಳಿಸಿದರು. ಮರುಹೋರಾಟ ನಡೆಸುವುದು ಅಸಾಧ್ಯವೆಂದು ಮನಗಂಡ ಪ್ರಣಯ್‌, ತಮ್ಮ ದೈಹಿಕ ಸಾಮರ್ಥ್ಯವನ್ನು ಮೂರನೇ ಗೇಮ್‌ಗೆ ಉಳಿಸಿಕೊಳ್ಳುವ ಸಲುವಾಗಿ ಹೆಚ್ಚಿನ ಪೈಪೋಟಿ ನೀಡದೆ ಗೇಮ್‌ಅನ್ನು ಎದುರಾಳಿಗೆ ಬಿಟ್ಟುಕೊಟ್ಟರು.

ಮೂರನೇ ಗೇಮ್‌ನಲ್ಲಿ ಲಯ ಕಂಡುಕೊಂಡ ಪ್ರಣಯ್ ಆರಂಭದಲ್ಲಿ 8–3ರ ಮುನ್ನಡೆ ಸಾಧಿಸಿದರು. ಪಟ್ಟುಬಿಡದ ಆ್ಯಂಗಸ್‌ ಅಸಾಧಾರಣ ಪ್ರದರ್ಶನ ನೀಡಿ ಮುಂದಿನ 9 ಪಾಯಿಂಟ್‌ಗಳಲ್ಲಿ ಎಂಟನ್ನೂ ತಮ್ಮದಾಗಿಸಿ 11–9ರಲ್ಲಿ ಮೇಲಗೈ ಪಡೆದರು.

ಒತ್ತಡಕ್ಕೆ ಒಳಗಾದ ಪ್ರಣಯ್‌, ಆಟದ ಮೇಲಿನ ಲಯ ಕಳೆದುಕೊಂಡರು. ಸಾಕಷ್ಟು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಅದೇ ಮುನ್ನಡೆಯನ್ನು ಕೊನೆಯವರೆಗೂ ಕಾಪಾಡಿಕೊಂಡ ಆ್ಯಂಗಸ್‌, ಫೈನಲ್‌ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.