ADVERTISEMENT

ಕೊರಿಯಾ ಓಪನ್‌ ಬ್ಯಾಡ್ಮಿಂಟನ್: ಭಾರತದ ಆಟಗಾರರಿಗೆ ನಿರಾಶೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2023, 14:15 IST
Last Updated 20 ಜುಲೈ 2023, 14:15 IST
ಎಚ್‌.ಎಸ್‌.ಪ್ರಣಯ್‌
ಎಚ್‌.ಎಸ್‌.ಪ್ರಣಯ್‌   

ಯೋಸು (ಕೊರಿಯಾ): ಭಾರತದ ಅಗ್ರಮಾನ್ಯ ಆಟಗಾರ ಎಚ್‌.ಎಸ್‌.ಪ್ರಣಯ್‌, ಕೊರಿಯಾ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯ ಎರಡನೇ ಸುತ್ತಿನಲ್ಲಿ ಗುರುವಾರ ಹಾಂಗ್‌ಕಾಂಗ್‌ನ ಲೀ ಚಿಯುಕ್‌ ಯಿಯು ಎದುರು ಸೋಲನುಭವಿಸಿದರು.

ಈ ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಪ್ರಣಯ್ 15–21, 21–19, 18–21 ರಲ್ಲಿ ತಮಗಿಂತ ಕೆಳಕ್ರಮಾಂಕದ ಲೀ ಎದುರು ಹಿಮ್ಮೆಟ್ಟಿದರು. ಮೂರು ಗೇಮ್‌ಗಳ ಈ ಪಂದ್ಯ ಒಂದು ಗಂಟೆಗೂ ಅಧಿಕ ಕಾಲ ನಡೆಯಿತು.

ಎರಡನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಪ್ರಿಯಾನ್ಶು ರಾಜಾವತ್‌ ಸೋಲನುಭವಿಸಿದರೂ, ಅಗ್ರ ಶ್ರೇಯಾಂಕದ ಕೊಡೈ ನರವೋಕಾ ಅವರಿಗೆ ಬೆವರಿಳಿಸಿದರು. ಜಪಾನ್‌ನ ಆಟಗಾರನಿಗೆ 21–14, 18–21, 21–17 ರಿಂದ ಜಯಗಳಿಸಲು ಒಂದು ಗಂಟೆ 22 ನಿಮಿಷ ಬೇಕಾಯಿತು.

ADVERTISEMENT

ಮಹಿಳೆಯರ ಡಬಲ್ಸ್‌ ಎರಡನೇ ಸುತ್ತಿನಲ್ಲಿ ಟ್ರೀಸಾ ಜೋಳಿ–ಗಾಯತ್ರಿ ಗೋಪಿಚಂದ್ ಜೋಡಿ ಕೇವಲ 33 ನಿಮಿಷಗಳಲ್ಲಿ ಕೊರಿಯಾದ ನಾ ಹಾ ಬೇಕ್‌– ಹೀ ಸೊ ಲೀ ಎದುರು 11–21, 4–21ರಲ್ಲಿ ಸೋಲನುಭವಿಸಿತು.

ಮಿಕ್ಸೆಡ್‌ ಡಬಲ್ಸ್‌ನಲ್ಲೂ ಕಥೆ ಭಿನ್ನವಾಗಿರಲಿಲ್ಲ. ನಾಲ್ಕನೇ ಶ್ರೇಯಾಂಕದ ಚೀನಾ ಜೋಡಿ ಝೆ ಯಾನ್‌ ಫೆಂಗ್‌– ಪಿಂಗ್‌ ಡಾಂಗ್‌ ಹುವಾಂಗ್ 21–5, 21–12 ರಿಂದ ಭಾರತದ ರೋಹನ್ ಕಪೂರ್– ಸಿಕ್ಕಿ ರೆಡ್ಡಿ ಜೋಡಿಯನ್ನು 35 ನಿಮಿಷಗಳಲ್ಲಿ ಹಿಮ್ಮೆಟ್ಟಿಸಿತು.

ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್‌ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.