ADVERTISEMENT

ಇಂಡೊನೇಷ್ಯಾ ಓಪನ್ ಬ್ಯಾಡ್ಮಿಂಟನ್: ಮಿಂಚಿದ ಸಿಂಧು, ಶ್ರೀಕಾಂತ್, ಪ್ರಣಯ್

ಟೋಕಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ವಿಕ್ಟರ್ ಅಕ್ಸೆಲ್ಸನ್‌ಗೆ ಸೋಲು

ಪಿಟಿಐ
Published 18 ನವೆಂಬರ್ 2021, 15:03 IST
Last Updated 18 ನವೆಂಬರ್ 2021, 15:03 IST
ಪಿ.ವಿ.ಸಿಂಧು –ಪಿಟಿಐ ಚಿತ್ರ
ಪಿ.ವಿ.ಸಿಂಧು –ಪಿಟಿಐ ಚಿತ್ರ   

ಬಾಲಿ: ಹಿನ್ನಡೆಯಿಂದ ಚೇತರಿಸಿಕೊಂಡು ಜಯ ಸಾಧಿಸಿದ ಭಾರತದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಮತ್ತು ಎಚ್‌.ಎಸ್‌.ಪ್ರಣಯ್ ಅವರು ಇಂಡೊನೇಷ್ಯಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ವಿಕ್ಟರ್ ಅಕ್ಸೆಲ್ಸನ್ ಅವರನ್ನು 14-21, 21-19, 21-16ರಲ್ಲಿ ಮಣಿಸಿದ ಪ್ರಣಯ್ ದಿನದ ಪ್ರಮುಖ ಆಕರ್ಣೆಯಾಗಿದ್ದರು. ಒಂದು ತಾಸು 11 ನಿಮಿಷಗಳ ಹಣಾಯಣಿಯಲ್ಲಿ ಅವರು ಮೊದಲ ಗೇಮ್‌ನ ಸೋಲಿಗೆ ತಿರುಗೇಟು ನೀಡಿ ಗೆಲುವಿನ ಹಾದಿಯಲ್ಲಿ ಸಾಗಿದರು. ಇದು, ಅಕ್ಸೆಲ್ಸನ್ ಎದುರಿನ ಆರು ಪಂದ್ಯಗಳಲ್ಲಿ ಪ್ರಣಯ್ ಅವರ ಮೊದಲ ಜಯವಾಗಿದೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೇ ಶ್ರೇಯಾಂಕದ ಸಿಂಧು17-21, 21-7, 21-12ರಲ್ಲಿ ಸ್ಪೇನ್‌ನ ಕ್ಲಾರಾ ಅಜುರ್‌ಮೆಂಡಿ ಅವರನ್ನು ಮಣಿಸಿದರು. ಕೇವಲ 47 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 47ನೇ ಸ್ಥಾನದಲ್ಲಿರುವ ಅಜುರ್‌ಮೆಂಡಿ ವಿರುದ್ಧ ಸಿಂಧು ಅವರ ಮೊದಲ ಪಂದ್ಯ ಇದಾಗಿತ್ತು. ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಭರ್ಜರಿ ಆಟದ ಮೂಲಕ ಸಿಂಧು ಜಯ ಸಾಧಿಸಿದರು.

ADVERTISEMENT

ಇಂಡೊನೇಷ್ಯಾದ ಆರನೇ ಶ್ರೇಯಾಂಕದ ಆಟಗಾರ ಜೊನಾಥನ್ ಕ್ರಿಸ್ಟಿ ವಿರುದ್ಧ 13-21, 21-18, 21-15ರಲ್ಲಿ ಕಿದಂಬಿ ಶ್ರೀಕಾಂತ್ ಗೆಲುವು ದಾಖಲಿಸಿದರು. ಶ್ರೇಯಾಂಕರಹಿತ ಶ್ರೀಕಾಂತ್ ಎಂಟರ ಘಟ್ಟದಲ್ಲಿ ಪ್ರಣಯ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಲಕ್ಷ್ಯ ಸೇನ್‌ಗೆ ಸೋಲು

ಯುವ ಆಟಗಾರ ಲಕ್ಷ್ಯ ಸೇನ್13-21, 19-21ರಲ್ಲಿ ಅಗ್ರ ಶ್ರೇಯಾಂಕದ ಜಪಾನ್ ಆಟಗಾರ ಕೆಂಟೊ ಮೊಮೊಟ ಎದುರು ಸೋತರು. ಮಿಶ್ರ ಡಬಲ್ಸ್‌ನಲ್ಲಿ ಧ್ರುವ ಕಪಿಲ ಮತ್ತು ಎನ್‌.ಸಿಕ್ಕಿ ರೆಡ್ಡಿ15-21, 23-21, 18-21ರಲ್ಲಿ ಥಾಯ್ಲೆಂಡ್‌ನ ಸುಪಕ್ ಜೊಮ್ಕೋಹ್ ಮತ್ತು ಸುಪಿಸರ ಪವ್ಸೆಂಪ್ರನ್‌ಗೆ ಮಣಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.