ಚಾಂಗ್‌ಝೌ: ಭಾರತದ ಅನುಭವಿ ಆಟಗಾರ ಎಚ್.ಎಸ್.ಪ್ರಣಯ್ ಅವರು ಚೀನಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಪಾನ್‌ನ ಕೋಕಿ ವತಾನಬೆ ವಿರುದ್ಧ ಸೋಲಿನ ಅಂಚಿನಿಂದ ಪಾರಾಗಿ ಎರಡನೇ ಸುತ್ತಿಗೆ ಮುನ್ನಡೆದರು. ಆದರೆ ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲೇ ಹೊರಬಿದ್ದರು.
ಮಂಗಳವಾರ ಆರಂಭವಾದ ಈ ಟೂರ್ನಿಯ ಮೊದಲ ಪಂದ್ಯದಲ್ಲಿ, 35ನೇ ಕ್ರಮಾಂಕದ ಆಟಗಾರ ಪ್ರಣಯ್ 8–21, 21–16, 23–21ರಿಂದ 18ನೇ ಕ್ರಮಾಂಕದ ವತಾನಬೆ ಅವರನ್ನು ಮಣಿಸಿದರು.
2023ರಲ್ಲಿ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ಗೆದ್ದಿದ್ದ ಪ್ರಣಯ್, ಜಪಾನ್ ಆಟಗಾರನಿಗೆ ಹೆಚ್ಚು ಹೋರಾಟ ತೋರಲಿಲ್ಲ. ಆದರೆ ಎರಡನೇ ಗೇಮ್‌ನಲ್ಲಿ ಉತ್ತಮ ‘ಕೋರ್ಟ್ ಕವರೇಜ್’ ಮತ್ತು ಹೊಡೆತಗಳ ಮೇಲೆ ನಿಯಂತ್ರಣ ಸಾಧಿಸಿ ಮೇಲುಗೈ ಪಡೆದರು. ಹೀಗಾಗಿ ಪಂದ್ಯ ನಿರ್ಣಾಯಕ ಗೇಮ್‌ಗೆ ಹೋಯಿತು.
ಅಂತಿಮ ಗೇಮ್‌ನಲ್ಲಿ ಪ್ರಣಯ್ 2–11ರಿಂದ ಹಿಂದೆಬಿದ್ದಿದ್ದರು. ನಂತರ ಚೇತರಿಸಿ ಸತತ ನಾಲ್ಕು ಪಾಯಿಂಟ್ ಪಡೆದರು. ನಂತರ ಮತ್ತೊಮ್ಮೆ 15–20ರಲ್ಲಿ ಹಿಂದೆಬಿದ್ದು ಸೋಲಿನ ಸುಳಿಯಲ್ಲಿದ್ದರು. ಐದು ಬಾರಿ ಮ್ಯಾಚ್ ಪಾಯಿಂಟ್ ರಕ್ಷಿಸಿದರು. ನಂತರ 21–20ರಲ್ಲಿ ಮುನ್ನಡೆ ಪಡೆದು ಕೊನೆಗೂ ಸ್ಮರಣೀಯ ಗೆಲುವು ಸಾಧಿಸಿದರು.
‘ನನ್ನ ವೃತ್ತಿಜೀವನದ ಈ ಹಂತದಲ್ಲಿ ಪ್ರತಿ ಗೆಲುವು ಗಣನೆಗೆ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆಟದ ಮಟ್ಟ ಬಹಳಷ್ಟು ಉತ್ತಮವಾಗುಯತ್ತಿದೆ. ಪ್ರತಿ ಸುತ್ತಿನ ಪಂದ್ಯ ಗೆಲ್ಲುವುದು ಕಠಿಣವಾಗುತ್ತಿದೆ’ ಎಂದು 33 ವರ್ಷ ವಯಸ್ಸಿನ ಪ್ರಣಯ್ ಪ್ರತಿಕ್ರಿಯಿಸಿದರು.
‘ಇದ್ದಕ್ಕಿದ್ದಂತೆ ಪುರುಷರ ಸಿಂಗಲ್ಸ್‌ನಲ್ಲಿ ಸರಾಸರಿ ವಯಸ್ಸು 22–23ಕ್ಕೆ ಇಳಿದಿದೆ. ಹೊಸಮುಖಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರ ಆಟ ಹೇಗಿರುತ್ತದೆಂದು ಹೇಳಲಸಾಧ್ಯ. ಹೀಗಾಗಿ ಅನುಭವಿಯಾದರೂ ಆಡುವುದು ಸುಲಭವಲ್ಲ’ ಎಂದರು.
ಲಕ್ಷ್ಯಗೆ ಸೋಲು: ಆದರೆ ಲಕ್ಷ್ಯ ಸೇನ್ ಅವರ ನಿರಾಶಾದಾಯಕ ಓಟ ಮುಂದುವರಿಯಿತು. ಅವರು 21–14, 22–24, 11–21 ರಲ್ಲಿ ಐದನೇ ಶ್ರೇಯಾಂಕದ ಚೀನಾ ಆಟಗಾರ ಲಿ ಶಿ ಫೆಂಗ್ ಅವರಿಗೆ ಮಣಿದರು.
ಮಹಿಳಾ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ ಕೂಡ ಮೊದಲ ಸುತ್ತಿನಲ್ಲೇ ನಿರ್ಗಮಿಸಿದರು. 23–21, 11–21, 10–21ರಲ್ಲಿ ಚೀನಾ ತೈಪೆಯ ಲಿನ್ ಹ್ಸಿಯಾಂಗ್ ಟಿ ಎದುರು ಸೋಲನುಭವಿಸಿದರು.
ಮಿಶ್ರ ಡಬಲ್ಸ್ ಜೋಡಿಯಾದ ಅಶಿತ್ ಸೂರ್ಯ– ಎ.ಪ್ರಮುತೇಶ್ ಕೂಡ ಮೊದಲ ಸುತ್ತನ್ನು ದಾಟಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.