ADVERTISEMENT

ವಾಲಿಬಾಲ್: ಬೆಂಗಳೂರು ಟಾರ್ಪಿಡೋಸ್‌ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 16:07 IST
Last Updated 16 ಫೆಬ್ರುವರಿ 2024, 16:07 IST
ಗೆಲುವಿನ ಸಂಭ್ರಮದಲ್ಲಿ ಬೆಂಗಳೂರು ಟಾರ್ಪಿಡೋಸ್ ತಂಡದ ಆಟಗಾರರು
ಗೆಲುವಿನ ಸಂಭ್ರಮದಲ್ಲಿ ಬೆಂಗಳೂರು ಟಾರ್ಪಿಡೋಸ್ ತಂಡದ ಆಟಗಾರರು   

ಬೆಂಗಳೂರು: ಸಾಂಘಿಕ ಆಟ ಪ್ರದರ್ಶಿಸಿದ ಬೆಂಗಳೂರು ಟಾರ್ಪಿಡೋಸ್ ತಂಡವು ಪ್ರೈಮ್ ವಾಲಿಬಾಲ್ ಲೀಗ್‌ನ ಮೂರನೇ ಆವೃತ್ತಿಯಲ್ಲಿ ಕೋಲ್ಕತ್ತ ಥಂಡರ್‌ಬೋಲ್ಟ್‌ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.

ಚೆನ್ನೈನ ಜವಾಹರ್‌ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 16-14, 14-16, 15-13, 15-10 ರಿಂದ ಕೋಲ್ಕತ್ತ ವಿರುದ್ಧ ಜಯ ಸಾಧಿಸಿತು. ಟಾರ್ಪಿಡೋಸ್‌ನ ಥಾಮಸ್ ಹೆಪ್ಟಿನ್‌ಸ್ಟಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಕೋಲ್ಕತ್ತ ತಂಡವು ಆರಂಭಿಕ ಹಿಡಿತ ಸಾಧಿಸಿತ್ತು. ಆ ತಂಡದ ರಾಹುಲ್ ಸೂಪರ್ ಸರ್ವ್ ವಿಶೇಷಗಳ ಮೂಲಕ ಗಮನ ಸೆಳೆದರು. ನಾಯಕ ಅಶ್ವಲ್ ರೈ ಕೂಡ ಆಕ್ರಮಣಕಾರಿ ಆಟವಾಡಿದರು. ಎದುರಾಳಿ ತಂಡದ ಪರಿಣಾಮಕಾರಿ ಸರ್ವ್‌ಗಳಿಗೆ ಬೆಂಗಳೂರು ತಂಡವೂ ತಕ್ಕ ಪ್ರತ್ಯುತ್ತರ ನೀಡಿತು. ತರಬೇತುದಾರ ಡೇವಿಡ್ ಲೀ ರಣತಂತ್ರ ಫಲಿಸಿತು. ಸೃಜನ ಶೆಟ್ಟಿ ಅವರು ಆಟವನ್ನೇ ಬದಲಿಸುವ ಸಾಮರ್ಥ್ಯ ಪ್ರದರ್ಶಿಸಿದರು. 

ADVERTISEMENT

ಕಳೆದ ಆವೃತ್ತಿಯಲ್ಲಿ ರನ್ನರ್ಸ್‌ ಅಪ್‌ ಆಗಿದ್ದ ಬೆಂಗಳೂರು ತಂಡವು ಸಮಬಲದ ಹೋರಾಟದಲ್ಲಿ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿತು. ಆದರೆ, ಎರಡನೇ ಗೇಮ್‌ನಲ್ಲಿ ಕೋಲ್ಕತ್ತ ತಂಡ ತಿರುಗೇಟು ನೀಡಿತು. ಆದರೆ, ಮೂರನೇ ಮತ್ತು ನಾಲ್ಕನೇ ಗೇಮ್‌ನಲ್ಲಿ ಮತ್ತೆ ಹಿಡಿತ ಸಾಧಿಸಿ ಗೆಲುವು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.