ADVERTISEMENT

ಮುತ್ತಿನ ನಗರಿಯಲ್ಲಿ ಇಂದಿನಿಂದ ಕಬಡ್ಡಿ ಹಬ್ಬ

ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ಗೆ ಪಟ್ನಾ ಪೈರೇಟ್ಸ್‌ ಸವಾಲು: ರೋಹಿತ್‌ ಕುಮಾರ್‌–ಪ್ರದೀಪ್‌ ನರ್ವಾಲ್‌ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:45 IST
Last Updated 19 ಜುಲೈ 2019, 19:45 IST
   

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಹಬ್ಬ ಮತ್ತೆ ಶುರುವಾಗಿದೆ. ಏಳನೇ ಆವೃತ್ತಿಗೆ ಶನಿವಾರ ಮುತ್ತಿನ ನಗರಿಯಲ್ಲಿ ಚಾಲನೆ ಸಿಗಲಿದೆ.

ಜುಲೈ 20ರಿಂದ ಒಟ್ಟು ಮೂರು ತಿಂಗಳ ಕಾಲ (ಅಕ್ಟೋಬರ್‌ 19ರವರೆಗೆ) ಗ್ರಾಮೀಣ ಕ್ರೀಡೆಯ ಸೊಬಗು ಸವಿಯುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ಹೋದ ಆವೃತ್ತಿಯಲ್ಲಿ ಇದ್ದ ವಲಯವಾರು ಪದ್ಧತಿಗೆ ಈ ಬಾರಿ ತೀಲಾಂಜಲಿ ಇಡಲಾಗಿದ್ದು ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪಂದ್ಯಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ.

ADVERTISEMENT

ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌, ಈ ಸಲವೂ ಕಿರೀಟದ ಮೇಲೆ ಕಣ್ಣಿಟ್ಟಿದೆ. ರೋಹಿತ್‌ ಕುಮಾರ್‌ ನಾಯಕತ್ವದ ಬುಲ್ಸ್‌ಗೆ ಆರಂಭದಲ್ಲೇ ಕಠಿಣ ಸವಾಲು ಎದುರಾಗಿದೆ. ಬೆಂಗಳೂರಿನ ತಂಡ ತನ್ನ ಮೊದಲ ಪಂದ್ಯದಲ್ಲಿ ಪ್ರದೀಪ್‌ ನರ್ವಾಲ್‌ ಮುಂದಾಳತ್ವದ ಪಟ್ನಾ ಪೈರೇಟ್ಸ್‌ ವಿರುದ್ಧ ಹೋರಾಡಲಿದೆ. ಬಲಿಷ್ಠರ ನಡುವಣ ಈ ಪೈಪೋಟಿಗೆ ಗಚಿಬೌಲಿ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧಗೊಂಡಿದೆ.

ಬುಲ್ಸ್‌ ಮತ್ತು ಪಟ್ನಾ ಲೀಗ್‌ನಲ್ಲಿ ಇದುವರೆಗೂ 15 ಸಲ ಮುಖಾಮುಖಿಯಾಗಿದ್ದು ಈ ಪೈಕಿ ರೋಹಿತ್‌ ಪಡೆ ಮೂರರಲ್ಲಷ್ಟೇ ಗೆದ್ದಿದೆ.

ಹೋದ ವರ್ಷ ತಂಡ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪವನ್‌ ಕುಮಾರ್‌ ಶೆರಾವತ್‌, ಬೆಂಗಳೂರು ತಂಡದ ಬೆನ್ನೆಲುಬಾಗಿದ್ದಾರೆ.

ಪಾದರಸದಂತಹ ಚಲನೆ ಮತ್ತು ನಿಖರ ವೇಗದ ಮೂಲಕ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಹೊಂದಿರುವ ಪವನ್‌, ಶನಿವಾರ ಚಾಕಚಕ್ಯತೆಯ ರೇಡ್‌ಗಳ ಮೂಲಕ ಅಭಿಮಾನಿಗಳನ್ನು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಲು ಕಾತರರಾಗಿದ್ದಾರೆ.

ನಾಯಕ ರೋಹಿತ್‌, ಮಹೇಂದರ್‌ ಸಿಂಗ್‌, ಅಮಿತ್‌ ಶೆರಾನ್‌ ಮತ್ತು ಆಶಿಶ್‌ ಕುಮಾರ್‌ ಅವರೂ ಶ್ರೇಷ್ಠ ಸಾಮರ್ಥ್ಯ ತೋರಿ ತಂಡಕ್ಕೆ ಗೆಲುವು ತಂದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ.

ಪ್ರದೀಪ್‌ ನರ್ವಾಲ್‌ ಅವರು ಪಟ್ನಾ ತಂಡದ ‘ಟ್ರಂಪ್‌ ಕಾರ್ಡ್‌’ ಆಗಿದ್ದಾರೆ. ಜಾಂಗ್‌ ಕುನ್‌ ಲೀ ಅವರ ಬಲವೂ ಈ ತಂಡಕ್ಕಿದೆ.

ಲೀಗ್‌ನ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟನ್ಸ್‌ ಮತ್ತು ಯು ಮುಂಬಾ ಎದುರಾಗಲಿವೆ. ಉಭಯ ತಂಡಗಳು ಲೀಗ್‌ನಲ್ಲಿ 10 ಸಲ ಮುಖಾಮುಖಿಯಾಗಿದ್ದು ಎರಡೂ ತಂಡಗಳು ತಲಾ ನಾಲ್ಕರಲ್ಲಿ ಗೆದ್ದಿವೆ. ಎರಡು ಪಂದ್ಯಗಳು ‘ಟೈ’ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.