ADVERTISEMENT

ಪ್ರೊ ಕಬಡ್ಡಿ ಲೀಗ್ ಟೂರ್ನಿ: ಬೆಂಗಳೂರು ಬುಲ್ಸ್‌ಗೆ ‘ಜೈಂಟ್’ ಸವಾಲು

ಪ್ರೊ ಕಬಡ್ಡಿ ಲೀಗ್‌ ಎಲಿಮಿನೇಟರ್‌ನಲ್ಲಿ ಯು.ಪಿ ಯೋಧಾ–ಪುಣೇರಿ ಪಲ್ಟನ್ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 13:53 IST
Last Updated 20 ಫೆಬ್ರುವರಿ 2022, 13:53 IST
ಪವನ್‌ ಶೆರಾವತ್‌
ಪವನ್‌ ಶೆರಾವತ್‌   

ಬೆಂಗಳೂರು: ಅಮೋಘ ಆಟದೊಂದಿಗೆ ಕಬಡ್ಡಿ ಪ್ರಿಯರನ್ನು ಮುದಗೊಳಿಸಿರುವ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಸೆಮಿಫೈನಲ್ ಮೇಲೆ ಕಣ್ಣಿಟ್ಟು ಸೋಮವಾರ ಕಣಕ್ಕೆ ಇಳಿಯಲಿದೆ. ಪ್ಲೇ ಆಫ್ ಹಂತದ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಬುಲ್ಸ್‌ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಸೆಣಸಲಿವೆ.

ಹೈ ಫ್ಲೈಯರ್‌ ಖ್ಯಾತಿಯ ಪವನ್ ಶೆರಾವತ್ ಅವರನ್ನು ನಿಯಂತ್ರಿಸಲು ಸುನಿಲ್ ಕುಮಾರ್ ನೇತೃತ್ವದ ಜೈಂಟ್ಸ್‌ ತಂಡದ ಬಲಿಷ್ಠ ರಕ್ಷಣಾ ವಿಭಾಗ ಸಜ್ಜಾಗಿದೆ. ಹೀಗಾಗಿ ಸೋಮವಾರದ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಮತ್ತೊಂದು ಪಂದ್ಯದಲ್ಲಿ ಯು.ಪಿ.ಯೋಧಾ ಮತ್ತು ಪುಣೇರಿ ಪಲ್ಟನ್ ಮುಖಾಮುಖಿಯಾಗಲಿವೆ. ಈ ಪಂದ್ಯಗಳಲ್ಲಿ ಗೆಲುವು ಸಾಧಿಸುವ ತಂಡಗಳು ಅಂತಿಮ ನಾಲ್ಕರ ಹಂತಕ್ಕೆ ಲಗ್ಗೆ ಇರಿಸಲಿವೆ. ಕನ್ನಡಿಗ ಪ್ರಶಾಂತ್ ಕುಮಾರ್ ರೈ ನಾಯಕತ್ವದ ಪಟ್ನಾ ಪೈರೇಟ್ಸ್ ಮತ್ತು ‘ಎಕ್ಸ್‌‍‍ಪ್ರೆಸ್’ ಖ್ಯಾತಿಯ ನವೀನ್ ಕುಮಾರ್ ನೇತೃತ್ವದ ದಬಂಗ್ ಡೆಲ್ಲಿ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶಿಸಿವೆ.

ADVERTISEMENT

ಲೀಗ್ ಹಂತದಲ್ಲಿ ಬೆಂಗಳೂರು ಬುಲ್ಸ್ 66 ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನ ಗಳಿಸಿದೆ. ಗುಜರಾತ್‌ ಜೈಂಟ್ಸ್ ಒಂದು ಪಾಯಿಂಟ್ ಹೆಚ್ಚು ಗಳಿಸಿದ್ದು ನಾಲ್ಕನೇ ಸ್ಥಾನದಲ್ಲಿದೆ. ನಿರ್ಣಾಯಕ ಘಟ್ಟಗಳಲ್ಲಿ ಚೇತರಿಸಿಕೊಳ್ಳುವ ರಕ್ಷಣಾ ವಿಭಾಗವೇ ಜೈಂಟ್ಸ್ ತಂಡದ ಬಲ. ಈ ಸಾಮರ್ಥ್ಯದಿಂದ ತಂಡ ಕೆಲವು ಪಂದ್ಯಗಳನ್ನು ಗೆದ್ದುಕೊಂಡಿದೆ. ಪವನ್ ಶೆರಾವತ್ ಏಕಾಂಗಿ ಹೋರಾಟದ ಮೂಲಕ ಬುಲ್ಸ್‌ಗಾಗಿ ಪಂದ್ಯಗಳನ್ನು ಗೆದ್ದುಕೊಟ್ಟ ಉದಾಹರಣೆಗಳೂ ಇವೆ.

ರೇಡಿಂಗ್‌ನಲ್ಲಿ ಚಂದ್ರನ್ ರಂಜಿತ್, ದೀಪಕ್ ನರ್ವಾಲ್ ಮತ್ತು ಅಬೊಲ್ ಫಜಲ್ ಅವರ ಬಲ ತಂಡಕ್ಕಿದೆ. ಮಹೇಂದರ್ ಸಿಂಗ್, ಮೋಹಿತ್ ಶೆರಾವತ್ ಮತ್ತು ಸೌರಭ್ ನಂದಾಲ್ ರಕ್ಷಣಾ ವಿಭಾಗದಲ್ಲಿ ನಿರೀಕ್ಷೆ ಮೂಡಿಸಿದ್ದಾರೆ.

ಜೈಂಟ್ಸ್‌ನಲ್ಲಿ ಸುನಿಲ್ ಕುಮಾರ್ ಅವರೊಂದಿಗೆ ಗಿರೀಶ್ ಮಾರುತಿ ಎರ್ನಕ್‌ ಮತ್ತು ಪರ್ವೇಶ್ ಬೇನ್ಸ್‌ವಾಲ್‌ ಕೂಡ ರಕ್ಷಣಾ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ.

ಪ್ರದೀಪ್‌ ನರ್ವಾಲ್ ಮೇಲೆ ಕಣ್ಣು

ಪುಣೇರಿ ಪಲ್ಟನ್ ಎದುರಿನ ಪಂದ್ಯದಲ್ಲಿ ಯು.ಪಿ.ಯೋಧಾ ತಂಡದ ದಾಖಲೆ ವೀರ ಪ್ರದೀಪ್ ನರ್ವಾಲ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಮೋಹಿತ್ ಗೋಯತ್ ಮತ್ತು ಅಸ್ಲಾಂ ಇನಾಂದಾರ್ ಜೋಡಿ ಪುಣೇರಿಯ ಭರವಸೆಯಾಗಿದ್ದಾರೆ.

ಈ ಎರಡೂ ತಂಡಗಳು ಲೀಗ್‌ನ ಆರಂಭದಲ್ಲಿ ನೀರಸ ಆಟವಾಡಿದ್ದವು. ನಿಧಾನಕ್ಕೆ ಚೇತರಿಸಿಕೊಂಡು ಪ್ಲೇ ಆಫ್‌ ಹಂತದಲ್ಲಿ ಸ್ಥಾನ ಗಳಿಸಿವೆ. ಯೋಧಾ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದರೆ ಪುಣೇರಿ ಆರನೇ ಸ್ಥಾನದಲ್ಲಿದೆ.

ಗುಜರಾತ್ ತಂಡದ ರಕ್ಷಣಾ ವಿಭಾಗ ಬಲಿಷ್ಠವಾಗಿದೆ. ಅದನ್ನು ಮೀರಿ ನಿಂತು ಪಾಯಿಂಟ್ಸ್ ಗಳಿಸುವುದು ನಮ್ಮ ತಂಡದ ಮುಂದೆ ಇರುವ ಬಲುದೊಡ್ಡ ಸವಾಲು

ಪವನ್ ಶೆರಾವತ್‌ ಬೆಂಗಳೂರು ಬುಲ್ಸ್ ನಾಯಕ

ಪವನ್ ಶೆರಾವತ್ ವಿಶ್ವದರ್ಜೆಯ ರೇಡರ್. ಅವರನ್ನು ಕಟ್ಟಿಹಾಕುವುದು ಯಾವುದೇ ತಂಡಕ್ಕೂ ಕಷ್ಟದ ಕೆಲಸ. ಈ ಹಿನ್ನೆಲೆಯಲ್ಲಿ ನಾವು ತಂತ್ರ ರೂಪಿಸುತ್ತಿದ್ದೇವೆ

ಸುನಿಲ್ ಕುಮಾರ್ ಗುಜರಾತ್ ಜೈಂಟ್ಸ್ ನಾಯಕ

ಇಂದಿನ ಪಂದ್ಯಗಳು (ಪ್ಲೇ ಆಫ್‌)

ಯು.ಪಿ.ಯೋಧಾ–ಪುಣೇರಿ ಪಲ್ಟನ್

ಆರಂಭ: ರಾತ್ರಿ 7.30

ಬೆಂಗಳೂರು ಬುಲ್ಸ್‌–ಗುಜರಾತ್ ಜೈಂಟ್ಸ್‌

ಆರಂಭ: ರಾತ್ರಿ 8.30

ಸ್ಥಳ: ಗ್ರ್ಯಾಂಡ್ ಶೆರಟನ್ ಹೋಟೆಲ್, ವೈಟ್‌ಫೀಲ್ಡ್‌

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.