ADVERTISEMENT

ಪ್ರೊ ಕಬಡ್ಡಿ: ಎರಡು ಪಂದ್ಯಗಳು ಟೈ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 20:43 IST
Last Updated 8 ಅಕ್ಟೋಬರ್ 2022, 20:43 IST
ಪುಣೇರಿ ಪಲ್ಟನ್ ಹಾಗೂ ಪಟ್ನಾ ಪೈರೆಟ್ಸ್ ತಂಡಗಳ ನಡುವಣ ಹೋರಾಟ  –ಪ್ರಜಾವಾಣಿ ವಾರ್ತೆ/ವಿ. ಪುಷ್ಕರ್ 
ಪುಣೇರಿ ಪಲ್ಟನ್ ಹಾಗೂ ಪಟ್ನಾ ಪೈರೆಟ್ಸ್ ತಂಡಗಳ ನಡುವಣ ಹೋರಾಟ  –ಪ್ರಜಾವಾಣಿ ವಾರ್ತೆ/ವಿ. ಪುಷ್ಕರ್    

ಬೆಂಗಳೂರು: ಕಂಠೀರವ ಕ್ರೀಡಾಂಗಣದ ಒಳಾಂಗಣದಲ್ಲಿ ಶನಿವಾರ ನಡೆದ ಪ್ರೊ ಕಬಡ್ಡಿ ಟೂರ್ನಿಯ ಎರಡು ಪಂದ್ಯಗಳೂ ಟೈ ಆದವು.

ಪಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ ನಡುವಣ ನಡೆದ ಈ ದಿನದ ಮೊದಲ ಪಂದ್ಯವು 34–34ರಿಂದ ಸಮವಾಯಿತು. ಇನ್ನೊಂದು ಪಂದ್ಯದಲ್ಲಿಗುಜರಾತ್ ಟೈಟನ್ಸ್ ಹಾಗೂ ತಮಿಳ್ ತಲೈವಾಸ್ 31–31ರಿಂದ ಸಮಬಲ ಸಾಧಿಸಿದವು.

ಪುಣೇರಿ ಪಲ್ಟನ್ ತಂಡವು ಮೊದಲಾರ್ಧದಲ್ಲಿ 23–16ರಿಂದ ಮುನ್ನಡೆ ಗಳಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ಪಟ್ನಾ ತಂಡವು 18–11ರಿಂದ ಮುನ್ನಡೆ ಸಾಧಿಸಿ ಸೋಲು ತಪ್ಪಿಸಿಕೊಂಡಿತು. ಪಟ್ನಾ ತಂಡದ ರೇಡರ್ ಸಚಿನ್ (8), ಆಲ್‌ರೌಂಡರ್ ರೋಹಿತ್ ಗುಲಿಯಾ (6) ಹಾಗೂ ಎಸ್. ವಿಶ್ವಾಸ್ (4) ಮಿಂಚಿದರು.

ADVERTISEMENT

ಪುಣೇರಿ ತಂಡದ ನಾಯಕ ಅಸ್ಲಂ ಇನಾಂದಾರ್ (7) ರೇಡಿಂಗ್ ಪಾಯಿಂಟ್ ಗಳಿಸಿದರು. ಮೋಹಿತ್ ಗೊಯತ್ (8) ಕೂಡ ಮಿಂಚಿನ ದಾಳಿ ನಡೆಸಿದರು.

ಇನ್ನೊಂದು ಪಂದ್ಯದ ಮೊದಲಾರ್ಧದಲ್ಲಿ ಗುಜರಾತ್ ತಂಡವು 18–16ರಿಂದ ಮುನ್ನಡೆ ಸಾಧಿಸಿತು. ಇದರಲ್ಲಿ 13 ರೇಡಿಂಗ್
ಪಾಯಿಂಟ್‌ಗಳು ಗುಜರಾತ್‌ ಪಾಲಾದವು. ಆದರೆ ದ್ವಿತೀಯಾರ್ಧದಲ್ಲಿ ಮರುಹೋರಾಟ ಮಾಡಿದ ತಲೈವಾಸ್ ತಂಡವು 15–13ರ ಮುನ್ನಡೆ ಗಳಿಸಿ ಸೋಲಿನಿಂದ ಪಾರಾಯಿತು.

ಆದರೆ ಈ ಅವಧಿಯಲ್ಲಿಯೂ ಹೆಚ್ಚು ರೇಡಿಂಗ್ ಪಾಯಿಂಟ್ (10)
ಗಳಿಸುವಲ್ಲಿ ಗುಜರಾತ್ ಸಫಲವಾಯಿತು. ತಂಡದ ರಾಕೇಶ್ (13) ಹಾಗೂ ಚಂದ್ರನ್ ರಂಜೀತ್ (5) ಮಿಂಚಿದರು. ತಮಿಳ್ ತಂಡದ ನಾಯಕ ಪವನ್ ಶೆರಾವತ್ (1)ನಿರಾಸೆ ಮೂಡಿಸಿದರು. ಆದರೆ ರೇಡರ್ ನರೇಂದರ್ 10 ಅಂಕ ಗಳಿಸಿದರು.

ಹರಿಯಾಣಕ್ಕೆ ಗೆಲುವು: ದಿನದ ಕೊನೆಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ತಂಡ 41–33 ರಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಮಣಿಸಿತು.

ಇಂದಿನ ಪಂದ್ಯಗಳು: ಜೈಪುರ್ ಪಿಂಕ್ ಪ್ಯಾಂಥರ್ಸ್–ಪಟ್ನಾ ಪೈರೆಟ್ಸ್ (ರಾತ್ರಿ 7.30); ತೆಲುಗು ಟೈಟನ್ಸ್–ಬೆಂಗಾಲ್ ವಾರಿಯರ್ಸ್ (ರಾತ್ರಿ 8.30)

ಪುಣೇರಿ ಪಲ್ಟನ್–ಬೆಂಗಳೂರು ಬುಲ್ಸ್ (ರಾತ್ರಿ 9.30)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್, ಹಾಟ್‌ಸ್ಟಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.