ADVERTISEMENT

ಪ್ರೊ ಕಬಡ್ಡಿ: ದಬಂಗ್ ಡೆಲ್ಲಿಗೆ ಎರಡನೇ ಜಯ

ಯದ ಖಾತೆ ತೆರೆದ ಯು ಮುಂಬಾ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 2:34 IST
Last Updated 11 ಅಕ್ಟೋಬರ್ 2022, 2:34 IST
ಯುಪಿ ಯೋಧಾ ದಾಳಿಗಾರನನ್ನು ಕಟ್ಟಿಹಾಕಲು ಯತ್ನಿಸಿದ ಯು ಮುಂಬಾ ಆಟಗಾರರು  –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್
ಯುಪಿ ಯೋಧಾ ದಾಳಿಗಾರನನ್ನು ಕಟ್ಟಿಹಾಕಲು ಯತ್ನಿಸಿದ ಯು ಮುಂಬಾ ಆಟಗಾರರು  –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್   

ಬೆಂಗಳೂರು: ನವೀನ್ ಕುಮಾರ್ ಅಮೋಘ ದಾಳಿಯ ಬಲದಿಂದ ದಬಂಗ್ ಡೆಲ್ಲಿ ತಂಡವು ಸೋಮವಾರ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಡೆಲ್ಲಿ ತಂಡವು 53–33ರಿಂದ ಗುಜರಾತ್ ಜೈಂಟ್ಸ್ ಎದುರು ಜಯಭೇರಿ ಬಾರಿಸಿತು.

ಡೆಲ್ಲಿ ತಂಡದ ನಾಯಕ ನವೀನಕುಮಾರ್ 15 ಅಂಕಗಳನ್ನು ಸೂರೆ ಮಾಡಿದರು. ಅವರಿಗೆ ತಕ್ಕ ಪೈಪೋಟಿ ನೀಡಿದ ಗುಜರಾತ್ ತಂಡದ ರೇಡರ್ ರಾಕೇಶ್ ಕೂಡ 15 ಅಂಕಗಳನ್ನು ಗಳಿಸಿದರು. ಡೆಲ್ಲಿ ತಂಡದ ಮತ್ತೊಬ್ಬ ರೇಡರ್ ಮಂಜೀತ್ (10) ಹಾಗೂ ಡಿಫೆಂಡರ್ ಕ್ರಿಷನ್ (7) ಮಹತ್ವದ ಕಾಣಿಕೆ ನೀಡಿದರು.

ADVERTISEMENT

ಪಂದ್ಯದ ಮೊದಲಾರ್ಧದಲ್ಲಿ ಡೆಲ್ಲಿ ತಂಡವು 21–17 ರ ಅಲ್ಪ ಮುನ್ನಡೆ ಗಳಿಸಿತ್ತು. ಎರಡನೇ ಅವಧಿಯಲ್ಲಿ ತನ್ನ ವೇಗ ಹೆಚ್ಚಿಸಿದ ತಂಡವು 32–16ರ ದೊಡ್ಡ ಅಂತರ ಸಾಧಿಸಿತು. ಪಂದ್ಯದಲ್ಲಿ ಒಟ್ಟು 20 ಅಂಕಗಳ ಅಂತರದ ಜಯ ಸಾಧಿಸಿತು. ಟೂರ್ನಿಯಲ್ಲಿ ಇದು ಡೆಲ್ಲಿಗೆ ಎರಡನೇ ಗೆಲುವು.

ಮುಂಬೈಗೆ ಮೊದಲ ಜಯ

ಜಯ್ ಭಗವಾನ್ (6) ಹಾಗೂ ಗುಮಾನ್ ಸಿಂಗ್ (5) ಅವರ ಅಮೋಘ ಆಟದ ಬಲದಿಂದ ಯು ಮುಂಬಾ ತಂಡವು ದಿನದ ಎರಡನೇ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ 30–23ರಿಂದ ಗೆದ್ದಿತು.

ಮೊದಲಾರ್ಧದದಲ್ಲಿ ಮುಂಬಾ ತಂಡವು 14–9ರ ಮುನ್ನಡೆ ಗಳಿಸಿತ್ತು. ಎರಡನೇ ಅವಧಿಯಲ್ಲಿ ಯೋಧಾಸ್ ತಂಡವು ಸ್ವಲ್ಪ ಪೈಪೊಟಿಯೊಡ್ಡಿತು. ಕೊನೆಗೂ ಏಳು ಅಂಕಗಳ ಅಂತರದಿಂದ ಜಯ ಸಾಧಿಸುವಲ್ಲಿ ತಂಡವು ಯಶಸ್ವಿಯಾಯಿತು. ಮುಂಬಾ ತಂಡಕ್ಕೆ ಇದು ಎರಡನೇ ಪಂದ್ಯ ಹಾಗೂ ಮೊದಲ ಜಯವಾಗಿದೆ.

ಇಂದಿನ ಪಂದ್ಯಗಳು

ಹರಿಯಾಣ ಸ್ಟೀಲರ್ಸ್–ತಮಿಳ್ ತಲೈವಾಸ್ (ರಾತ್ರಿ 7.30)

ಪಟ್ನಾ ಪೈರೆಟ್ಸ್–ತೆಲುಗು ಟೈಟನ್ಸ್ (ರಾತ್ರಿ 8.30)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್, ಹಾಟ್‌ಸ್ಟಾರ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.