ADVERTISEMENT

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಎರಡನೇ ಗೆಲುವು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 22:30 IST
Last Updated 8 ಸೆಪ್ಟೆಂಬರ್ 2025, 22:30 IST
ಹರಿಯಾಣ ಸ್ಟೀಲರ್ಸ್‌ ತಂಡದ ರೇಡರನ್ನು ಹಿಡಿಯಲು ಯತ್ನಿಸಿದ ಬೆಂಗಳೂರು ಬುಲ್ಸ್‌ ಆಟಗಾರರು
ಹರಿಯಾಣ ಸ್ಟೀಲರ್ಸ್‌ ತಂಡದ ರೇಡರನ್ನು ಹಿಡಿಯಲು ಯತ್ನಿಸಿದ ಬೆಂಗಳೂರು ಬುಲ್ಸ್‌ ಆಟಗಾರರು   

ವಿಶಾಖಪಟ್ಟಣ: ಅಲಿರೆಜಾ ಮಿರ್ಜೈಯನ್ ಅವರ ಅಮೋಘ ರೇಡಿಂಗ್‌ ಬಲದಿಂದ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ಪಂದ್ಯದಲ್ಲಿ 40–33ರಿಂದ ಹಾಲಿ ಚಾಂಪಿಯನ್‌ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಸೋಲಿಸಿತು.

ಆರಂಭದ ಮೂರು ಪಂದ್ಯಗಳಲ್ಲಿ ಸೋತಿದ್ದ ಬುಲ್ಸ್‌ ತಂಡವು ಇದೀಗ ಸತತ ಎರಡನೇ ಗೆಲುವು ದಾಖಲಿಸಿಕೊಂಡು ಪಾಯಿಂಟ್ಸ್‌ ಪಟ್ಟಿಯಲ್ಲಿ ಏಳನೇ ಬಡ್ತಿ ಪಡೆಯಿತು. ಹರಿಯಾಣ ತಂಡಕ್ಕೆ ನಾಲ್ಕು ಪಂದ್ಯಗಳಲ್ಲಿ ಇದು ಎರಡನೇ ಸೋಲಾಗಿದೆ. 

ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಸೋಮವಾರ ಪಂದ್ಯ ಆರಂಭವಾದ ಕೇವಲ 5 ನಿಮಿಷಗಳ ಅಂತರದಲ್ಲಿ ಅಲಿರೆಜಾ ಅವರ ಬಲದಿಂದ ಸ್ಟೀಲರ್ಸ್‌ ತಂಡವನ್ನು ಆಲೌಟ್‌ ಬಲೆಗೆ ಬೀಳಿಸಿದ ಬುಲ್ಸ್‌ ಆಟಗಾರರು 9-2ರಲಿ ಮುನ್ನಡೆ ಸಾಧಿಸಿದರು.

ADVERTISEMENT

ವಿರಾಮದ ವೇಳೆಗೆ ಮೂರು ಅಂಕಗಳಿಂದ (21–18) ಮುನ್ನಡೆಯಲ್ಲಿದ್ದ ಯೋಗೇಶ್‌ ನಾಯಕತ್ವದ ಬುಲ್ಸ್‌, ಉತ್ತರಾರ್ಧದಲ್ಲೂ ಪಾರಮ್ಯ ಸಾಧಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿತು. ಬುಲ್ಸ್ ತಂಡವು ಎದುರಾಳಿ ತಂಡವನ್ನು ಎರಡು ಬಾರಿ ಆಲೌಟ್‌ ಮಾಡಿ ಗಮನ ಸೆಳೆಯಿತು. 

ಪಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿದ್ದ ಅಲಿರೆಜಾ ಈ ಪಂದ್ಯದಲ್ಲೂ 12 ಅಂಕ ಕಲೆಹಾಕಿದರು. ಅವರಿಗೆ ರೇಡಿಂಗ್‌ನಲ್ಲಿ ಆಶಿಶ್ ಮಲಿಕ್ (5) ಸಾಥ್‌ ನೀಡಿದರು.

ಈ ಪಂದ್ಯದಲ್ಲಿ ಬುಲ್ಸ್‌ ತಂಡವು ಟ್ಯಾಕಲ್‌ನಲ್ಲೇ 14 ಅಂಕ ಗಳಿಸಿದ್ದು ವಿಶೇಷವಾಗಿತ್ತು. ಯೋಗೇಶ್ ದಹಿಯಾ (6), ದೀಪಕ್ ಶಂಕರ್ (5) ಟ್ಯಾಕಲ್‌ನಲ್ಲಿ ಮೋಡಿ ಮಾಡಿದರು. ಸ್ಟೀಲರ್ಸ್‌ ತಂಡಕ್ಕಾಗಿ ಶಿವಂ ಪತಾರೆ 7 ಮತ್ತು ಮಯಂಕ್ ಸೈನಿ 6 ಪಾಯಿಂಟ್ಸ್‌ ಗಳಿಸಿದರು. 

ದಿನದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್‌ ಮತ್ತು ಪಟ್ನಾ ಪೈರೇಟ್ಸ್‌ ತಂಡಗಳು ಮುಖಾಮುಖಿಯಾಗಿವೆ.

ಇಂದಿನ ಪಂದ್ಯಗಳು

ಡೆಲ್ಲಿ ದಬಾಂಗ್‌– ಬೆಂಗಾಲ್‌ ವಾರಿಯರ್ಸ್‌ (ರಾತ್ರಿ 8)

ಗುಜರಾತ್‌ ಜೈಂಟ್ಸ್‌– ಜೈಪುರ ಪಿಂಕ್‌ ಪ್ಯಾಂಥರ್ಸ್‌ (ರಾತ್ರಿ 9)

ನೇರಪ್ರಸಾರ:

ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.