ADVERTISEMENT

ಪ್ರೊ ಕಬಡ್ಡಿ 9ನೇ ಆವೃತ್ತಿ: ಬೆಂಗಳೂರು ಬುಲ್ಸ್‌ ಶುಭಾರಂಭ

ಪ್ರೊ ಕಬಡ್ಡಿ 9ನೇ ಆವೃತ್ತಿ: ಖಂಡೋಲಾ, ನೀರಜ್ ಮಿಂಚಿನದಾಳಿ; ಚಾಂಪಿಯನ್ ಡೆಲ್ಲಿ ಗೆಲುವಿನ ಆರಂಭ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 16:34 IST
Last Updated 7 ಅಕ್ಟೋಬರ್ 2022, 16:34 IST
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಪ್ರೊ ಕಬಡ್ಡಿ ಟೂರ್ನಿಯ ಮೊದಲ ಪಂದ್ಯದಲ್ಲಿ ದಬಂಗ್ ಡೆಲ್ಲಿ ಆಟಗಾರರು ಯು ಮುಂಬಾ ದಾಳಿಗಾರನನ್ನು ಹಿಡಿತಕ್ಕೆ ಪಡೆಯುವ ಪ್ರಯತ್ನ ಮಾಡಿದರು  –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್ 
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಪ್ರೊ ಕಬಡ್ಡಿ ಟೂರ್ನಿಯ ಮೊದಲ ಪಂದ್ಯದಲ್ಲಿ ದಬಂಗ್ ಡೆಲ್ಲಿ ಆಟಗಾರರು ಯು ಮುಂಬಾ ದಾಳಿಗಾರನನ್ನು ಹಿಡಿತಕ್ಕೆ ಪಡೆಯುವ ಪ್ರಯತ್ನ ಮಾಡಿದರು  –ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್    

ಬೆಂಗಳೂರು: ನೀರಜ್ ನರ್ವಾಲ್ ಹಾಗೂ ವಿಕಾಶ್ ಖಂಡೋಲಾ ಅವರ ಚುರುಕಿನ ದಾಳಿಯ ಬಲದಿಂದ ಆತಿಥೇಯ ಬೆಂಗಳೂರು ಬುಲ್ಸ್ ತಂಡವು ಶುಕ್ರವಾರ ಇಲ್ಲಿ ಆರಂಭವಾದ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಜಯದ ಆರಂಭ ಮಾಡಿತು.

ಶ್ರೀಕಂಠೀರವ ಕ್ರೀಡಾಂಗಣದ ಒಳಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು 34–29ರಿಂದ ತೆಲುಗು ಟೈಟನ್ಸ್‌ ಸವಾಲನ್ನು ಮೆಟ್ಟಿ ನಿಂತಿತು.

ಮಹೇಂದರ್ ಸಿಂಗ್ ನಾಯಕತ್ವದ ಬುಲ್ಸ್ ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ಟೈಟನ್ಸ್‌ ಕೂಡ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿತು. ಇದರಿಂದಾಗಿ ಪಂದ್ಯದ ಬಹುಭಾಗದಲ್ಲಿ ಉಭಯ ತಂಡಗಳು ಸಮಬಲ ಗಳಿಸಿದ್ದವು.

ADVERTISEMENT

ಆದರೆ ಒಟ್ಟು ಏಳು ಅಂಕ ಗಳಿಸಿ ಮಿಂಚಿದ ನೀರಜ್, ತಲಾ ಐದು ಅಂಕ ಗಳಿಸಿದ ಖಂಡೋಲಾ ಮತ್ತು ಭರತ್ ಬುಲ್ಸ್‌ ತಂಡಕ್ಕೆ ಬಲ ತುಂಬಿದರು. ಬಲಿಷ್ಠ ರಕ್ಷಣಾ ತಂತ್ರ ಹೆಣೆದ ಡಿಫೆಂಡರ್ ಮಹೇಂದರ್ ಕೂಡ ನಾಲ್ಕು ಅಂಕ ಗಳಿಸಿದರು. ಅವರಿಗೆ ಲೆಫ್ಟ್‌ ಕಾರ್ನರ್‌ ಡಿಫೆಂಡರ್ ಸೌರಭ್ ನಂದಾಲ್ (4) ಕೂಡ ಉತ್ತಮ ಜೊತೆ ನೀಡಿದರು. ಟೈಟನ್ಸ್‌ ಪರವಾಗಿ ರಜನೀಶ್ ಏಳು ಅಂಕ ಗಳಿಸಿದರು.

ಡೆಲ್ಲಿ ಶುಭಾರಂಭ

ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡವು ಯು ಮುಂಬಾ ವಿರುದ್ಧ 41-27 ಅಂತರದಲ್ಲಿ ಜಯ ಗಳಿಸುವ ಮೂಲಕ ಶುಭಾರಂಭ ಮಾಡಿತು.

ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಡೆಲ್ಲಿ ತಂಡದ ನಾಯಕನಾಯಕ ನವೀನ್‌ ಚುರುಕಿನ ದಾಳಿ ನಡೆಸಿದರು. ಅವರು 13 ಅಂಕಗಳನ್ನು ಗಳಿಸಿದರು. ನವೀನ್‌ ಲೀಗ್‌ ಇತಿಹಾಸಲ್ಲಿ 43ನೇ ಬಾರಿಗೆ ಸೂಪರ್‌ ಟೆನ್ ಅಂಕಗಳನ್ನು ಗಳಿಸಿದ ಸಾಧನೆ ಮಾಡಿದರು.

ಇನ್ನೊಂದೆಡೆ ಯು ಮುಂಬಾ ತಂಡ ಎರಡು ಬಾರಿ ಆಲೌಟ್‌ ಆಯಿತು. ತಂಡದ ಪರ ಆಶೀಶ್‌ 7 ಅಂಕಗಳನ್ನು ಗಳಿಸಿದರು.

ವಂಶಿಕಾ ರಾಷ್ಟ್ರಗೀತೆ

ಕನ್ನಡ ವಾಹಿನಿಗಳ ರಿಯಾಲಿಟಿ ಶೋನಲ್ಲಿ ಜನಮನ ಗೆದ್ದ ಪುಟ್ಟ ತಾರೆ ವಂಶಿಕಾ ಅಂಜನಿ ಕಶ್ಯಪ್‌ ಅವರು ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಟೂರ್ನಿ ಉದ್ಘಾಟನೆಗೊಂಡಿತು.

ಕೋವಿಡ್ ಕಾರಣದಿಂದ ಹೋದ ವರ್ಷ ಪ್ರೇಕ್ಷಕರಿಗೆ ಅವಕಾಶವಿರಲಿಲ್ಲ. ಈ ಬಾರಿ ಅವಕಾಶ ನೀಡಲಾಗಿದೆ. ಮೊದಲ ದಿನವೇ ಎಲ್ಲ ಆಸನಗಳೂ ಭರ್ತಿಯಾಗಿದ್ದವು.

ಪಂದ್ಯಗಳು

ಪಟ್ನಾ ಪೈರೆಟ್ಸ್–ಪುಣೇರಿ ಪಲ್ಟನ್

ಗುಜರಾತ್ ಜೈಂಟ್ಸ್–ತಮಿಳ್ ತಲೈವಾಸ್

ಬೆಂಗಾಲ್ ವಾರಿಯರ್ಸ್–ಹರಿಯಾಣ ಸ್ಟೀಲರ್ಸ್

ಆರಂಭ: ರಾತ್ರಿ 7.30ರಿಂದ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.