ADVERTISEMENT

ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್‌ಗೆ ರೋಚಕ ಜಯ; ಗುಜರಾತ್ ಜೈಂಟ್ಸ್‌ಗೆ ಐದನೇ ಸೋಲು

ಪ್ರದೀಶ್ ಎಚ್.ಮರೋಡಿ
Published 15 ಸೆಪ್ಟೆಂಬರ್ 2025, 23:30 IST
Last Updated 15 ಸೆಪ್ಟೆಂಬರ್ 2025, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಜೈಪುರ: ಗುಜರಾತ್‌ ಜೈಂಟ್ಸ್‌ನ ರೇಡರ್‌ಗಳನ್ನು ಐದು ಬಾರಿ ಸೂಪರ್‌ ಟ್ಯಾಕಲ್‌ ಬಲೆಗೆ ಕೆಡವಿದ ಹಾಲಿ ಚಾಂಪಿಯನ್‌ ಹರಿಯಾಣ ಸ್ಟೀಲರ್ಸ್‌ ತಂಡವು 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಮೂರು ಪಾಯಿಂಟ್ಸ್‌ ಅಂತರದ ರೋಚಕ ಜಯ ಸಾಧಿಸಿತು.

ಸವಾಯಿ ಮಾನ್‌ ಸಿಂಗ್‌ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಸ್ಟೀಲರ್ಸ್‌ ತಂಡವು 40–37ರಿಂದ ಜೈಂಟ್ಸ್‌ ತಂಡವನ್ನು ಮಣಿಸಿತು. ಹರಿಯಾಣದ ಡಿಫೆಂಡರ್‌ಗಳು 17 ಅಂಕಗಳನ್ನು ಟ್ಯಾಕಲ್‌ನಲ್ಲಿ ಬಾಚಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ಟೀಲರ್ಸ್‌ಗೆ ಈ ಆವೃತ್ತಿಯ ಐದು ಪಂದ್ಯಗಳಲ್ಲಿ ಮೂರನೇ ಗೆಲುವು ಇದಾಗಿದೆ. 

ADVERTISEMENT

ಪಂದ್ಯದ ಮೊದಲ ಐದು ನಿಮಿಷದಲ್ಲಿ ಜೈಂಟ್ಸ್‌ ತಂಡವು ಮುನ್ನಡೆ ಕಾಯ್ದುಕೊಂಡಿತ್ತು. ನಂತರದಲ್ಲಿ ಸತತ ಮೂರು ಸೂಪರ್‌ ಟ್ಯಾಕಲ್‌ ಮಾಡಿದ ಸ್ಟೀಲರ್ಸ್‌ ಆಟಗಾರರು ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದರು. ಹೀಗಾಗಿ, ಮೊದಲಾರ್ಧದಲ್ಲಿ ಹರಿಯಾಣ ತಂಡವು 25–20ರಿಂದ ಹಿಡಿತ ಸಾಧಿಸಿತ್ತು.

ದ್ವಿತೀಯಾರ್ಧದಲ್ಲಿ ಮರುಹೋರಾಟ ಸಂಘಟಿಸಿದ ಜೈಂಟ್ಸ್‌ ತಂಡವು ಸಮಬಲದ ಹೋರಾಟ ನಡೆಸಿತು. ಪಂದ್ಯ ಮುಗಿಯಲು ಆರು ನಿಮಿಷ ಇರುವಂತೆ 33–33 ಅಂಕ ಗಳಿಸಿ ಎದುರಾಳಿ ತಂಡಕ್ಕೆ ಒತ್ತಡ ಹೇರಿತು. ರಾಕೇಶ್ ಸುಂಗ್ರೋಯಾ (14 ಅಂಕ) ಅವರು ರೇಡಿಂಗ್‌ನಲ್ಲಿ ಮಿಂಚು ಹರಿಸಿದರು. ಅವರಿಗೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಹೀಗಾಗಿ, ಹ್ಯಾಟ್ರಿಕ್ ಸೋಲು ಅನುಭವಿಸಬೇಕಾಯಿತು. ಅಲ್ಲದೆ, ಈ ಆವೃತ್ತಿಯ ಆರು ಪಂದ್ಯಗಳಲ್ಲಿ ಐದನೇ ಸೋಲು ಇದಾಗಿದೆ. 

ಹರಿಯಾಣ ಸ್ಟೀಲರ್ಸ್‌ ರೇಡರ್‌ ಶಿವಂ ಪತಾರೆ (12 ಅಂಕ) ಈ ಆವೃತ್ತಿಯಲ್ಲಿ ಎರಡನೇ ಬಾರಿ ಸೂಪರ್‌ ಟೆನ್‌ ಸಾಧನೆ ಮಾಡಿದರು. ಅವರಿಗೆ  ವಿನಯ್‌ (8) ಸಾಥ್‌ ನೀಡಿದರು. ಜೈದೀಪ್‌ ದಹಿಯಾ (6) ಮತ್ತು ಸಾಹಿತ್‌ (4) ಟ್ಯಾಕಲ್‌ನಲ್ಲಿ ಉಪಯುಕ್ತ ಕಾಣಿಕೆ ನೀಡಿದರು. 

ಇಂದಿನ ಪಂದ್ಯಗಳು

  • ಯು.ಪಿ. ಯೋಧಾಸ್‌– ಬೆಂಗಾಲ್‌ ವಾರಿಯರ್ಸ್‌ (ರಾತ್ರಿ 8)

  • ಬೆಂಗಳೂರು ಬುಲ್ಸ್‌– ತಮಿಳು ತಲೈವಾಸ್‌ (ರಾತ್ರಿ 9)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.