ADVERTISEMENT

ಪ್ರೊ ಕಬಡ್ಡಿ: ವಾರಿಯರ್ಸ್‌ ಓಟಕ್ಕೆ ‘ಸ್ಟೀಲ್’ ಗೋಡೆ ತಡೆ

ಖಂಡೋಲ, ಮಣಿಂದರ್ ಸೂಪರ್ 10

ವಿಕ್ರಂ ಕಾಂತಿಕೆರೆ
Published 26 ಆಗಸ್ಟ್ 2019, 20:15 IST
Last Updated 26 ಆಗಸ್ಟ್ 2019, 20:15 IST
ಬೆಂಗಾಲ್ ವಾರಿಯರ್ಸ್‌ನ ಮಣಿಂದರ್ ಸಿಂಗ್ ಹರಿಯಾಣ ಸ್ಟೀಲರ್ಸ್ ಆವರಣದಲ್ಲಿ ಪಾಯಿಂಟ್ ಗಳಿಸಲು ಪ್ರಯತ್ನಿಸಿದರು
ಬೆಂಗಾಲ್ ವಾರಿಯರ್ಸ್‌ನ ಮಣಿಂದರ್ ಸಿಂಗ್ ಹರಿಯಾಣ ಸ್ಟೀಲರ್ಸ್ ಆವರಣದಲ್ಲಿ ಪಾಯಿಂಟ್ ಗಳಿಸಲು ಪ್ರಯತ್ನಿಸಿದರು   

ನವದೆಹಲಿ: ಜಿದ್ದಾಜಿದ್ದಿಯ ಪೈಪೋಟಿಯಲ್ಲಿ ಹರಿಯಾಣ ಸ್ಟೀಲರ್ಸ್ ತಂಡದ ಕೆಚ್ಚೆದೆಯ ಆಟಕ್ಕೆ ಬೆಂಗಾಲ್ ವಾರಿಯರ್ಸ್‌ ಮಣಿಯಿತು. ತ್ಯಾಗರಾಜ ಕ್ರೀಡಾಂಗಣದಲ್ಲಿಸೋಮವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ 36–33ರ ಗೆಲುವು ಸಾಧಿಸಿದ ಹರಿಯಾಣ ತಂಡ ಬೆಂಗಾಲ್‌ನ ಅಜೇಯ ಓಟಕ್ಕೆ ಕಡಿವಾಣ ಹಾಕಿತು. ಸತತ 5 ಪಂದ್ಯಗಳಲ್ಲಿ ಸೋಲರಿಯದೆ (3 ಜಯ, 2 ಟೈ), ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದ ಬೆಂಗಾಲ್‌ ನಿರಾಸೆಗೆ ಒಳಗಾಯಿತು.

ರೈಡಿಂಗ್‌ ಮತ್ತು ಡಿಫೆಂಡಿಂಗ್‌ನಲ್ಲಿ ಸಮಬಲದ ಸಾಮರ್ಥ್ಯ ಹೊಂದಿದ್ದ ತಂಡಗಳು ಆರಂಭದಿಂದಲೇ ಭಾರಿ ಪೈಪೋಟಿ ನಡೆಸಿದವು. ಪ್ರೊ ಕಬಡ್ಡಿಯಲ್ಲಿ 50ನೇ ಪಂದ್ಯ ಆಡಿದ ವಿಕಾಸ್ ಖಂಡೋಲ (11 ಪಾಯಿಂಟ್ಸ್‌; 10 ಟಚ್) ಸುಲಭವಾಗಿ ಪಾಯಿಂಟ್‌ಗಳನ್ನು ಹೆಕ್ಕಿ ತಂದರು. ವಿನಯ್ ಮತ್ತು ಕನ್ನಡಿಗ ಪ್ರಶಾಂತ್ ಕುಮಾರ್ ರೈ ಕೂಡ ರೈಡಿಂಗ್‌ನಲ್ಲಿ ಮಿಂಚಿದರು. ಮೊದಲನೇ ನಿಮಿಷದಲ್ಲಿ ವಿಕಾಸ್ ಖಂಡೋಲ ಲೀಗ್‌ನಲ್ಲಿ 300 ಪಾಯಿಂಟ್ ಗಳಿಸಿದ ಸಾಧನೆ ಮಾಡಿದರು.

ಪ್ರಪಂಚನ್ ‘ಸೂಪರ್’ ರೈಡ್‌: ಆರನೇ ನಿಮಿಷದಲ್ಲಿ ಬೆಂಗಾಲ್ 4–7ರ ಹಿನ್ನಡೆ ಗಳಿಸಿತ್ತು. ಈ ಸಂದರ್ಭದಲ್ಲಿ ತಂಡದ ಆವರಣದಲ್ಲಿ ಇಬ್ಬರೇ ಆಟಗಾರರು ಇದ್ದರು. ಬೆಂಗಳೂರಿನ ಕೆ.ಪ್ರ‍ಪಂಚನ್‌ ಕೆಚ್ಚೆದೆಯ ಆಟದ ಮೂಲಕ ವಿಕಾಸ್‌, ಸುನಿಲ್, ರವಿ ಮತ್ತು ವಿನಯ್ ಅವರನ್ನು ಔಟ್ ಮಾಡಿ ಕಬಡ್ಡಿ ಪ್ರಿಯರಿಗೆ ರಸ ರೋಮಾಂಚನ ನೀಡಿದರು. ಆದರೆ ಹರಿಯಾಣ ಪಟ್ಟು ಬಿಡಲಿಲ್ಲ. ಮೊದಲಾರ್ಧದ ಕೊನೆಯ ನಿಮಿಷದಲ್ಲಿ ಪ್ರಪಂಚನ್ ಅವರನ್ನು ಟ್ಯಾಕ್ಲಿಂಗ್ ಬಲೆಯಲ್ಲಿ ಕೆಡವಿದ ಧರ್ಮರಾಜ ಚೇರಲಾತನ್ ಹರಿಯಾಣಕ್ಕೆ 1 ಪಾಯಿಂಟ್‌ನ (18–17) ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾದರು.

ADVERTISEMENT

ಆಲ್‌ರೌಂಡ್ ಆಟ:ದ್ವಿತೀಯಾರ್ಧದಲ್ಲಿ ಹರಿಯಾಣ ಆಲ್‌ರೌಂಡ್ ಆಟವಾಡಿತು. ವಿಕಾಸ್ ಖಂಡೋಲ ‘ಸೂಪರ್ ರೈಡ್‌’ ಮೂಲಕ ಮಿಂಚಿದರು. 21ನೇ ನಿಮಿಷದಲ್ಲಿ 300 ರೈಡ್ ಪಾಯಿಂಟ್‌ಗಳ ಸಾಧನೆ ಮಾಡಿದ ಅವರು 23ನೇ ನಿಮಿಷದಲ್ಲಿ ‘ಸೂಪರ್ 10’ ಗಳಿಸಿ ಸಂಭ್ರಮಿಸಿದರು.

ಇದು ಈ ಆವೃತ್ತಿಯಲ್ಲಿ ಅವರ 4ನೇ ಮತ್ತು ಒಟ್ಟಾರೆ 10ನೇ ‘ಸೂಪರ್ 10’ ಆಗಿದೆ.

ಕೊನೆಯ 5 ನಿಮಿಷ ಇದ್ದಾಗ ಹರಿಯಾಣದ ಅಂಗಳದಲ್ಲಿ ಧರ್ಮರಾಜ ಮತ್ತು ರವಿಕುಮಾರ್ ಮಾತ್ರ ಇದ್ದರು. ಎದುರಾಳಿ ತಂಡದ ನಾಯಕನನ್ನು ರೋಮಾಂಚಕ ಟ್ಯಾಕಲ್ ಮೂಲಕ ಕೆಡವಿ ಇವರಿಬ್ಬರು ತಂಡವನ್ನು ಆಲ್ ಔಟ್ ಆತಂಕದಿಂದ ಪಾರು ಮಾಡಿದರು. ನಂತರ ಬೆಂಗಾಲ್ ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಹರಿಯಾಣದ ವಿನಯ್‌ 9 ಮತ್ತು ಧರ್ಮರಾಜ 4 ಪಾಯಿಂಟ್ ಗಳಿಸಿದರು. ಮಣಿಂದರ್ ಸಿಂಗ್‌ 15 (13 ಟಚ್‌), ಪ್ರಪಂಚನ್‌ 7 ಪಾಯಿಂಟ್ ಕಲೆ ಹಾಕಿದರು.ಮಣಿಂದರ್ ಸಿಂಗ್ 600 ರೈಡ್ ಪಾಯಿಂಟ್‌ ಮತ್ತು 500 ಟಚ್ ಪಾಯಿಂಟ್‌ಗಳನ್ನೂ ಪೂರೈಸಿದರು.

ಶ್ರೀಕಾಂತ್‌ ಮೋಹಕ ರೈಡ್‌: ಮತ್ತೊಂದು ಪಂದ್ಯದಲ್ಲಿ ಶ್ರೀಕಾಂತ್ ಜಾಧವ್ (15 ಪಾಯಿಂಟ್ಸ್‌) ಅವರ ಅಮೋಘ ರೈಡಿಂಗ್ ಬಲದಿಂದ ಯು.ಪಿ.ಯೋಧಾ, ಪುಣೇರಿ ಪಲ್ಟನ್‌ ವಿರುದ್ಧ35–30ರಲ್ಲಿ ಜಯ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.