ಜೈಪುರ: ನಾಯಕನಿಗೆ ತಕ್ಕ ಆಟವಾಡಿದ ದೇವಾಂಕ್ ದಲಾಲ್ ಅವರ ಅಮೋಘ ರೇಡಿಂಗ್ ಬಲದಿಂದ ಬೆಂಗಾಲ್ ವಾರಿಯರ್ಸ್ ತಂಡವು ಮಂಗಳವಾರ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಗೆಲುವು ದಾಖಲಿಸಿತು. ಈ ಪಂದ್ಯಕ್ಕೆ ಮೊದಲು ಸತತ ನಾಲ್ಕು ಸೋಲು ಕಂಡಿದ್ದ ಬೆಂಗಾಲ್‌ಗೆ ಎರಡನೇ ಗೆಲುವಿನೊಡನೆ ನಿಟ್ಟುಸಿರುಬಿಟ್ಟರು.
ಗೆಲುವಿನ ತೂಗುಯ್ಯಾಲೆ ಕಂಡ ಪಂದ್ಯದಲ್ಲಿ ವಾರಿಯರ್ಸ್ ತಂಡವು 41–37 ಅಂಕಗಳಿಂದ ಯು.ಪಿ ಯೋಧಾಸ್ ತಂಡವನ್ನು ಮಣಿಸಿತು. ಪಂದ್ಯದ ಬಹುತೇಕ ಅವಧಿಯಲ್ಲಿ ಮುನ್ನಡೆ ಸಾಧಿಸಿದ್ದ ಯೋಧಾಸ್ ತಂಡವು ಕೊನೆಯ ಹತ್ತು ನಿಮಿಷಗಳಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತು.
ಸವಾಯಿ ಮಾನ್ ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ‘ರೈವಲ್ರಿ ವಾರ’ದ ಹಣಾಹಣಿಯ ಮೊದಲಾರ್ಧದಲ್ಲಿ ಯೋಧಾಸ್ ತಂಡವು 18–13ರಿಂದ ಮುನ್ನಡೆ ಪಡೆದಿತ್ತು. ಆದರೆ, ಉತ್ತರಾರ್ಧದಲ್ಲಿ ದೇವಾಂಕ್ ಅವರು ತಮ್ಮ ತಂಡಕ್ಕೆ ಮಹತ್ವದ ಚೇತರಿಕೆ ನೀಡಿದರು.
ದೇವಾಂಗ್ (17 ಪಾಯಿಂಟ್) ಸತತ ಆರನೇ ಬಾರಿ ‘ಸೂಪರ್ ಟೆನ್’ ಸಾಧನೆ ಮಾಡಿ, ಗೆಲುವಿನ ರೂವಾರಿಯಾದರು. ಈ ಆವೃತ್ತಿಯ ಆರು ಪಂದ್ಯಗಳಲ್ಲಿ ಅವರು ಒಟ್ಟು 93 ಅಂಕ ಕಲೆಹಾಕಿ, ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಬೆಂಗಾಲ್ ಪರ ಡಿಫೆಂಡರ್ ಆಶಿಶ್ (6) ಮತ್ತು ರೇಡರ್ ಮನ್‌ಪ್ರೀತ್ (5) ‘ಹೈ ಫೈ’ ಸಾಧನೆಗೆ ಪಾತ್ರರಾದರು. ಈ ಗೆಲುವಿನೊಂದಿಗೆ ಬೆಂಗಾಲ್ ತಂಡವು ಅಂಕಪಟ್ಟಿಯಲ್ಲಿ 12ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
ಯೋಧಾಸ್ ತಂಡಕ್ಕೆ ಇದು ಆರು ಪಂದ್ಯಗಳಲ್ಲಿ ಮೂರನೇ ಸೋಲಾಗಿದೆ. ಈ ಹಿಂದಿನ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ‘ಸೂಪರ್ ಟೆನ್’ ಸಾಧನೆ ಮಾಡಿದ್ದ ಕನ್ನಡಿಗ ಗಗನ್ ಗೌಡ ಅವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆದರೂ 7 ಅಂಕ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು.
ಇಂದಿನ ಪಂದ್ಯಗಳು
ತೆಲುಗು ಟೈಟನ್ಸ್– ದಬಾಂಗ್ ಡೆಲ್ಲಿ (ರಾತ್ರಿ 8)
ಹರಿಯಾಣ ಸ್ಟೀಲರ್ಸ್– ಪಟ್ನಾ ಪೈರೇಟ್ಸ್ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.