ಜೈಪುರ: ರೇಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಸಾಂಘಿಕ ಆಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್ ತಂಡವು ಸೋಮವಾರ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ 4 ಅಂಕಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಆವೃತ್ತಿಯ 45ನೇ ಪಂದ್ಯದಲ್ಲಿ ಬುಲ್ಸ್ ತಂಡ 28-24ರಿಂದ ಜೈಂಟ್ಸ್‌ಗೆ ಸೋಲುಣಿಸಿತು. ತಮಿಳು ತಲೈವಾಸ್ ವಿರುದ್ಧ ಹಿಂದಿನ ಪಂದ್ಯದಲ್ಲಿ ಸೋಲು ಕಂಡಿದ್ದ ಯೋಗೇಶ್ ಸಾರಥ್ಯದ ಬುಲ್ಸ್ ತಂಡವು ಮತ್ತೆ ಗೆಲುವಿನ ಹಳಿಗೆ ಮರಳಿತು.
ಬೆಂಗಳೂರು ತಂಡಕ್ಕೆ ಒಂಬತ್ತು ಪಂದ್ಯಗಳಲ್ಲಿ ಇದು ಐದನೇ ಗೆಲುವಾಗಿದೆ. ಒಟ್ಟು 10 ಅಂಕಗಳನ್ನು ಸಂಪಾದಿಸಿ ಲೀಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಜೈಂಟ್ಸ್ ತಂಡಕ್ಕೆ ಏಳು ಪಂದ್ಯಗಳಲ್ಲಿ ಇದು ಆರನೇ ಸೋಲಾಗಿದ್ದು, ಕೊನೆಯ ಸ್ಥಾನದಲ್ಲಿ ಮುಂದುವರಿದಿದೆ.
ಆರಂಭದಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಕಾರಣ ರೇಡರ್‌ಗಳು ಪಾಯಿಂಟ್ಸ್ ಕಲೆಹಾಕಲು ತಿಣುಕಾಡಿದರು. ಮೊದಲಾರ್ಧದಲ್ಲಿ ಲಭಿಸಿದ ನಾಲ್ಕು ಅಂಕಗಳ (17–13) ಮುನ್ನಡೆಯ ವಿಶ್ವಾಸದೊಂದಿಗೆ ಆಟ ಮುಂದುವರಿಸಿದ ಬೆಂಗಳೂರು ತಂಡವು ಯಾವುದೇ ಹಂತದಲ್ಲೂ ಎದುರಾಳಿಗೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಕೊನೆಯ ಹಂತದಲ್ಲಿ ಜೈಂಟ್ಸ್ ತಂಡವು ಕೊಂಚ ಪ್ರತಿರೋಧ ತೋರಿ, ಸೋಲಿನ ಅಂತರ ಕಡಿಮೆ ಮಾಡಿಕೊಂಡಿತು.
ಬುಲ್ಸ್ ಪರ ಆಕಾಶ್ ಶಿಂದೆ (7 ಅಂಕ), ಯೋಗೇಶ್ (6), ದೀಪಕ್ ಶಂಕರ್ (4) ಮತ್ತು ಆಶಿಶ್ ಮಲಿಕ್ (4) ಗಮನ ಸೆಳೆಯುವ ಆಟ ಪ್ರದರ್ಶಿಸಿದರು. ಈ ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದ ಅಲಿರೆಜಾ ಮಿರ್ಜಾಯಿನ್ ಮೂರು ಅಂಕ ಗಳಿಸಲಷ್ಟೇ ಶಕ್ತವಾದರು. ಗುಜರಾತ್ ಪರ ವಿಶ್ವನಾಥ್ ಮತ್ತು ಲಕ್ಕಿ ಶರ್ಮ ತಲಾ 5 ಅಂಕ ಗಳಿಸಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಯು.ಪಿ. ಯೋಧಾಸ್ ತಂಡವು 39–22 ರಿಂದ ತಮಿಳು ತಲೈವಾಸ್ ತಂಡವನ್ನು ಸುಲಭವಾಗಿ ಮಣಿಸಿತು.
ಇಂದಿನ ಪಂದ್ಯಗಳು
ಗುಜರಾತ್ ಜೈಂಟ್ಸ್– ತೆಲುಗು ಟೈಟನ್ಸ್ (ರಾತ್ರಿ 8)
ಜೈಪುರ ಪಿಂಕ್ ಪ್ಯಾಂಥರ್ಸ್–ಯು ಮುಂಬಾ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.