ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ ಸ್ವರೂಪಕ್ಕೆ ಕಾಲಕಾಲಕ್ಕೆ ಹೊಸ ಸ್ಪರ್ಶ ನೀಡಲಾಗಿದೆ. ಈ ಬಾರಿಯ 12ನೇ ಆವೃತ್ತಿಯಲ್ಲೂ ಟೈಬ್ರೇಕರ್, ಗೋಲ್ಡನ್ ರೇಡ್, ಪ್ಲೇಇನ್, ಪ್ಲೇ ಆಫ್ ಸೇರಿದಂತೆ ನಿಯಮಗಳಲ್ಲಿ ಬದಲಾವಣೆ ತಂದು, ಸ್ಪರ್ಧೆಯನ್ನು ಮತ್ತಷ್ಟು ರೋಚಕಗೊಳಿಸುವ ಪ್ರಯತ್ನ ಮಾಡಲಾಗಿದೆ. ಈ ಪ್ರಯೋಗಗಳ ಸೂತ್ರದಾರಿ ‘ಕಬಡ್ಡಿ ರಾವ್’ ಎಂದೇ ಹೆಸರಾಗಿರುವ ಇ. ಪ್ರಸಾದ್ ರಾವ್.
ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್) ಪ್ರಸ್ತುತ ತಾಂತ್ರಿಕ ನಿರ್ದೇಶಕರಾಗಿರುವ ರಾವ್ ಅವರು, ಅಂತರರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ನ ತಾಂತ್ರಿಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ನಾಲ್ಕೂವರೆ ದಶಕಗಳಿಂದ ಕಬಡ್ಡಿ ಕ್ಷೇತ್ರದಲ್ಲೇ ಕೃಷಿ ಮಾಡುತ್ತಿರುವ ಅವರು, ಕ್ರೀಡೆಯ ವಿಕಸನ ಮತ್ತು ಹೊಸ ಪ್ರಯೋಗಗಳ ಕುರಿತು ಜೈಪುರದಲ್ಲಿ ನಡೆದ 'ರೈವಲರಿ ವೀಕ್' ಮಧ್ಯೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.
‘ಭಾರತೀಯ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾಗಿರುವ ಕಬಡ್ಡಿ ಕಳೆದ ಒಂದು ದಶಕದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ. ಪಿಕೆಎಲ್ ಬಂದ ಬಳಿಕ ಈ ಕ್ರೀಡೆಯ ಖದರ್ ಬದಲಾಗಿದೆ. ದೇಶದಲ್ಲಿ ಕ್ರಿಕೆಟ್ ನಂತರ ಈ ಕ್ರೀಡೆ ಜನಪ್ರಿಯವಾಗಲು ಅದರಲ್ಲಿ ಅಡಗಿರುವ ಸೌಂದರ್ಯವೇ ಕಾರಣ. ಅದರ ಒಳನೋಟವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ ಕಬಡ್ಡಿಗಿಂತ ರೋಮಾಂಚನ ಕ್ರೀಡೆ ಮತ್ತೊಂದಿಲ್ಲ’ ಎನ್ನುತ್ತಾರೆ ರಾವ್.
‘ಕೆಲ ವರ್ಷಗಳ ಹಿಂದೆ ಕಬಡ್ಡಿಯು ದೈಹಿಕ ತಾಕತ್ತು ಉಳ್ಳವರ ಕ್ರೀಡೆಯಾಗಿತ್ತು. ಆದರೆ, ಇಂದು ಈ ಕ್ರೀಡೆಯೊಳಗೆ ವಿಜ್ಞಾನ ಪ್ರವೇಶ ಮಾಡಿದ್ದರಿಂದ ಅವರ ಮೌಲ್ಯವೂ ವೃದ್ಧಿಸಿದೆ. ಪಿಕೆಎಲ್ ಸ್ವರೂಪದಲ್ಲಿನ ಬದಲಾವಣೆಯೂ ವಿಜ್ಞಾನಕ್ಕೆ ಹೊರತಾಗಿಲ್ಲ. ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ರೋಮಾಂಚನ ಅನುಭವ ನೀಡುವ ಉದ್ದೇಶದೊಂದಿಗೆ ನಾನಾ ಪ್ರಯೋಗ ಮಾಡುತ್ತಿದ್ದೇವೆ. ಈ ಪ್ರಯೋಗಗಳು ಪಿಕೆಎಲ್‌ಗೆ ಸೀಮಿತವಾಗದೆ ಜನರ ಮಧ್ಯೆ ಪರ– ವಿರೋಧ ಚರ್ಚೆಯಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
‘ಪ್ಲೇಆಫ್ ಹಂತದಲ್ಲಿ ಸೀಮಿತವಾದ ಟೈಬ್ರೇಕರ್, ಗೋಲ್ಡನ್ ರೈಡ್ ನಿಯಮವನ್ನು ಈ ಬಾರಿ ಲೀಗ್ ಹಂತಕ್ಕೆ ಪರಿಚಯಿಸಿದ್ದರಿಂದ ಸಾಕಷ್ಟು ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ ಐದು ಪಂದ್ಯಗಳ ಫಲಿತಾಂಶ ಟೈಬ್ರೇಕರ್‌ನಲ್ಲಿ ನಿರ್ಧಾರವಾಗಿದೆ. ಇದು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವ ಕ್ಷಣಗಳು. ಈ ನಿಯಮಗಳನ್ನು ನಾವು ಹೊಸದಾಗಿ ಮಾಡಿಲ್ಲ. ಹಾಕಿ, ಫುಟ್‌ಬಾಲ್ ಕ್ರೀಡೆಯಿಂದ ಎರವಲು ಪಡೆದಿದ್ದೇವೆ. ಆದರೆ, ಕಬಡ್ಡಿಯಲ್ಲಿ ಮಾತ್ರ ಉಭಯ ತಂಡಗಳಿಗೆ ಅಂಕ ಗಳಿಸಲು ಅವಕಾಶವಿದೆ. ಅದು ಈ ಕ್ರೀಡೆಯ ಸೌಂದರ್ಯ’ ಎಂದು ಹೇಳಿದರು.
‘ಹಿಂದಿನ ಆವೃತ್ತಿಯಲ್ಲಿ ಲೀಗ್‌ನಲ್ಲಿ ಆರು ತಂಡಗಳಿಗೆ ಪ್ಲೇ ಆಫ್ ಮೂಲಕ ಫೈನಲ್‌ಗೆ ಹೋಗಲು ಅವಕಾಶವಿತ್ತು. ಈ ಬಾರಿ ಪ್ಲೇ ಇನ್ ಮತ್ತು ಪ್ಲೇ ಆಫ್ ಮಾದರಿ ಪ್ರಯೋಗ ಮಾಡಿ ಎಂಟು ತಂಡಗಳಿಗೆ ಆ ಅವಕಾಶ ನೀಡಲಾಗಿದೆ. ತಂಡಗಳ ನಡುವೆ ಆರೋಗ್ಯಕರ ಸ್ಪರ್ಧೆ ಹೆಚ್ಚಿಸುವುದು ನಮ್ಮ ಉದ್ದೇಶ. ಈ ಪ್ರಯೋಗಗಳು ಯಶಸ್ಸು ಕಂಡರೆ ಭವಿಷ್ಯದಲ್ಲಿ ಅದು ಮುಂದುವರಿಯಬಹುದು, ಇಲ್ಲವೇ ಕೈಬಿಡಬಹುದು. ಪಿಕೆಎಲ್‌ನ ನಿಯಮ ಮತ್ತು ಸ್ವರೂಪದಂತೆ ಗ್ರಾಮೀಣ ಮಟ್ಟದಲ್ಲಿ ಟೂರ್ನಿ ಆಯೋಜಿಸುತ್ತಿರುವುದು ಆಶಾಯದಾಯಕ ಬೆಳವಣಿಗೆ. ಮುಂದೊಂದು ದಿನ ನಮ್ಮ ನಿಮಯಗಳು ಅಂತರರಾಷ್ಟ್ರೀಯ ಪಂದ್ಯಗಳಿಗೂ ವಿಸ್ತರಣೆಯಾದರೂ ಅಚ್ಚರಿಯಿಲ್ಲ’ ಎನ್ನುತ್ತಾರೆ ರಾವ್.
‘ಪ್ರೊ ಕಬಡ್ಡಿ ಲೀಗ್ ಜನಪ್ರಿಯವಾಗುವಲ್ಲಿ ಪ್ರಾದೇಶಿಕ ಭಾಷೆಗಳ ಕೊಡುಗೆ ತುಂಬಾ ದೊಡ್ಡದು. ದಶಕದ ಹಿಂದೆ ಎರಡು ಭಾಷೆಗಳಿಗೆ ಸೀಮಿತವಾಗಿದ್ದ ಪ್ರಸಾರವನ್ನು ಇಂದು ಎಂಟು ಭಾಷೆಗಳಿಗೆ ವಿಸ್ತರಿಸಲಾಗಿದೆ’ ಎಂದು ಜಿಯೊಸ್ಟಾರ್ ಸ್ಪೋರ್ಟ್ಸ್ ವೀವರ್‌ಷಿಪ್ ಅಂಡ್ ಮಾನಿಟೈಸೇಷನ್, ಸ್ಪೋರ್ಟ್ಸ್ ಮುಖ್ಯಸ್ಥ ಸಿದ್ದಾರ್ಥ್ ಶರ್ಮಾ ಹೇಳಿದರು.
ಪಿಕೆಎಲ್‌ನಲ್ಲಿ ಆಟಗಾರರ ಮತ್ತು ಪ್ರೇಕ್ಷಕರ ನಡುವಿನ ಸಂಪರ್ಕ ಸೇತುವೆಯಂತೆ ‘ಜಿಯೊ ಸ್ಟಾರ್’ ಕೆಲಸ ಮಾಡುತ್ತಿದೆ. ಆಟದಲ್ಲಿ ರೋಚಕ ಕ್ಷಣವನ್ನು ಸೆರೆಯಿಡಿದು ಅದೇ ತೀವ್ರತೆಯನ್ನು ಉಳಿಸಿಕೊಂಡು ಪ್ರೇಕ್ಷಕರಿಗೆ ತಲುಪಿಸುವುದು ನಮ್ಮ ಉದ್ದೇಶ. ಇಂದಿನ ಸ್ಪರ್ಧಾತ್ಮಕ ಎಐ ಜಗತ್ತಿನಲ್ಲಿ ವೀಕ್ಷಕರಿಗೆ ತಾಜಾ ಅನುಭವವನ್ನು ಕಲ್ಪಿಸುವುದು ಬಹು ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಜಿಯೊ ಸ್ಟಾರ್ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ’ ಎಂದು ತಿಳಿಸಿದರು. ‘ಪಿಕೆಎಲ್ ವೀಕ್ಷಕರ ಸಂಖ್ಯೆ ಆವೃತ್ತಿಯಿಂದ ಆವೃತ್ತಿಗೆ ಏರಿಕೆಯಾಗುತ್ತಿದೆ. ಹಳ್ಳಿ ಜನರು ಈ ಕ್ರೀಡೆಯನ್ನು ಇಷ್ಪಪಟ್ಟು ನೋಡುತ್ತಾರೆ. ಹೀಗಾಗಿ ಈ ಬಾರಿ ಹರ್ಯಾನ್ವಿ ಮತ್ತು ಭೋಜ್‌ಪುರಿ ಪ್ರಾದೇಶಿಕ ಭಾಷೆಯಲ್ಲಿ ಪ್ರಸಾರ ಆರಂಭಿಸಲಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ದೇಶೀಯ ಭಾಷೆಗಳಲ್ಲಿ ಪ್ರಸಾರ ಮಾಡುವ ಉದ್ದೇಶವಿದೆ’ ಎಂದರು.
ಸಿದ್ದಾರ್ಥ್ ಶರ್ಮಾ, ಜಿಯೊಸ್ಟಾರ್ ಸ್ಪೋರ್ಟ್ಸ್ ವೀವರ್‌ಷಿಪ್ ಅಂಡ್ ಮಾನಿಟೈಸೇಷನ್, ಸ್ಪೋರ್ಟ್ಸ್ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.