ADVERTISEMENT

ಪ್ರೊ ಕಬಡ್ಡಿ: ವಾರಿಯರ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 18:30 IST
Last Updated 21 ಡಿಸೆಂಬರ್ 2018, 18:30 IST
ಬೆಂಗಾಲ್‌ ವಾರಿಯರ್ಸ್‌ ತಂಡದ ಆಟಗಾರರು ತಮಿಳ್ ತಲೈವಾಸ್‌ ತಂಡದ ಅಜಯ್ ಠಾಕೂರ್ ಅವರನ್ನು ಬಂಧಿಸಿದರು
ಬೆಂಗಾಲ್‌ ವಾರಿಯರ್ಸ್‌ ತಂಡದ ಆಟಗಾರರು ತಮಿಳ್ ತಲೈವಾಸ್‌ ತಂಡದ ಅಜಯ್ ಠಾಕೂರ್ ಅವರನ್ನು ಬಂಧಿಸಿದರು   

ಕೋಲ್ಕತ್ತ: ತವರಿನ ಅಭಿಮಾನಿಗಳ ಎದುರು ಅಮೋಘ ಆಟ ಆಡಿದ ಬೆಂಗಾಲ್‌ ವಾರಿಯರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ ಆರನೇ ಆವೃತ್ತಿಯ ಪಂದ್ಯದಲ್ಲಿ ಗೆಲುವಿನ ತೋರಣ ಕಟ್ಟಿದೆ.

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹಣಾಹಣಿಯಲ್ಲಿ ವಾರಿಯರ್ಸ್‌ 27–24 ಪಾಯಿಂಟ್ಸ್‌ನಿಂದ ತಮಿಳ್‌ ತಲೈವಾಸ್‌ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ‘ಪ್ಲೇ ಆಫ್’ ಪ್ರವೇಶದ ಕನಸನ್ನು ಜೀವಂತವಾಗಿಟ್ಟುಕೊಂಡಿತು.

ಪ್ರೊ ಕಬಡ್ಡಿ ಲೀಗ್‌ನ 500ನೇ ಪಂದ್ಯ ಇದಾಗಿತ್ತು.

ADVERTISEMENT

ಜಾಂಗ್‌ ಕುನ್‌ ಲೀ ಅವರು ಬೆಂಗಾಲ್ ತಂಡದ ಗೆಲುವಿನ ರೂವಾರಿಯಾದರು. ಅವರು ‘ಸೂಪರ್‌ ಟೆನ್‌’ (12 ಪಾಯಿಂಟ್ಸ್‌) ಸಾಧನೆ ಮಾಡಿದರು. ಒಟ್ಟು 18 ರೇಡ್‌ಗಳನ್ನು ಮಾಡಿದರು. ತಲೈವಾಸ್‌ ಪರ ಸುಖೇಶ್‌ ಹೆಗ್ಡೆ ಮಿಂಚಿದರು. ಕರ್ನಾಟಕದ ಸುಕೇಶ್‌ 18 ರೇಡ್‌ಗಳನ್ನು ಮಾಡಿ ಒಂಬತ್ತು ಪಾಯಿಂಟ್ಸ್‌ ಹೆಕ್ಕಿದರು.

ಮಣಿಂದರ್‌ ಸಿಂಗ್ ಅವರು ಮೊದಲ ರೇಡ್‌ನಲ್ಲೇ ಎರಡು ಪಾಯಿಂಟ್ಸ್‌ ಗಳಿಸಿ ಬೆಂಗಾಲ್‌ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಮೂರನೇ ನಿಮಿಷದಲ್ಲಿ ಸುಕೇಶ್‌ ಹೆಗ್ಡೆ ‘ಸೂಪರ್‌ ರೇಡ್‌’ ಮಾಡಿ ಅಭಿಮಾನಿಗಳನ್ನು ರಂಜಿಸಿದರು. ಹೀಗಾಗಿ ತಲೈವಾಸ್‌ 6–4ರ ಮುನ್ನಡೆ ತನ್ನದಾಗಿಸಿಕೊಂಡಿತು. ಇದರ ಬೆನ್ನಲ್ಲೇ ಕುನ್‌ ಲೀ ‘ಸೂಪರ್‌ ರೇಡ್‌’ ಮಾಡಿ 7–7 ಸಮಬಲಕ್ಕೆ ಕಾರಣರಾದರು.

ನಂತರವೂ ಸುಕೇಶ್‌ ಮತ್ತು ಕುನ್‌ ಲೀ ಅವರ ರೇಡಿಂಗ್‌ ಮೋಡಿ ಮುಂದುವರಿಯಿತು. ಹೀಗಾಗಿ ಉಭಯ ತಂಡಗಳು 15–15ರ ಸಮಬಲದೊಂದಿಗೆ ವಿರಾಮಕ್ಕೆ ಹೋದವು.

ದ್ವಿತೀಯಾರ್ಧದಲ್ಲಿ ಬೆಂಗಾಲ್‌ ತಂಡ ರಕ್ಷಣಾ ವಿಭಾಗದಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿತು. 23ನೇ ನಿಮಿಷದಲ್ಲಿ ತಲೈವಾಸ್‌ ಆವರಣ ಖಾಲಿ ಮಾಡಿದ ಆತಿಥೇಯರು ಮುನ್ನಡೆ ತಮ್ಮದಾಗಿಸಿಕೊಂಡರು.

ನಂತರವೂ ಚುರುಕಿನ ಸಾಮರ್ಥ್ಯ ತೋರಿದ ಈ ತಂಡ ಮುನ್ನಡೆಯನ್ನು 23–21ಕ್ಕೆ ಹೆಚ್ಚಿಸಿಕೊಂಡಿತು. ಕುತೂಹಲ ಕೆರಳಿಸಿದ್ದ ಕೊನೆಯ ಐದು ನಿಮಿಷಗಳ ಆಟದಲ್ಲಿ ಬೆಂಗಾಲ್‌ ಆಟಗಾರರು ಪಾರಮ್ಯ ಮೆರೆದರು. ತಲೈವಾಸ್‌ ತಂಡದ ಡಿ.ಪ್ರದೀಪ್ ಅವರನ್ನು ರಕ್ಷಣಾ ಬಲೆಯೊಳಗೆ ಬೀಳಿಸಿದ ವಾರಿಯರ್ಸ್‌ ಆಟಗಾರರು ಮುನ್ನಡೆಯನ್ನು 24–21ಕ್ಕೆ ಹೆಚ್ಚಿಸಿಕೊಂಡು ಗೆಲುವಿನ ಹಾದಿ ಸುಗಮ ಮಾಡಿಕೊಂಡರು.

ಅಂತಿಮ ಮೂರು ನಿಮಿಷಗಳಲ್ಲಿ ಮೂರು ಪಾಯಿಂಟ್ಸ್‌ ಹೆಕ್ಕಿದ ಆತಿಥೇಯರು ಸಂಭ್ರಮದ ಹೊಳೆಯಲ್ಲಿ ಮಿಂದೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.