ADVERTISEMENT

ಪ್ರೊ ಕಬಡ್ಡಿ: ಬುಲ್ಸ್‌ಗೆ ನಿರಾಸೆ ಮೂಡಿಸಿದ ಸ್ಟೀಲರ್ಸ್

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 18:49 IST
Last Updated 11 ಆಗಸ್ಟ್ 2019, 18:49 IST
ಬೆಂಗಳೂರು ಬುಲ್ಸ್ ಅಂಗಳದಲ್ಲಿ ಪಾಯಿಂಟ್ ಗಳಿಸಲು ಪ್ರಯತ್ನಿಸಿದ ಹರಿಯಾಣ ಸ್ಟೀಲರ್ಸ್‌ ಆಟಗಾರ
ಬೆಂಗಳೂರು ಬುಲ್ಸ್ ಅಂಗಳದಲ್ಲಿ ಪಾಯಿಂಟ್ ಗಳಿಸಲು ಪ್ರಯತ್ನಿಸಿದ ಹರಿಯಾಣ ಸ್ಟೀಲರ್ಸ್‌ ಆಟಗಾರ   

ಅಹಮದಾಬಾದ್: ಜಿದ್ದಾಜಿದ್ದಿಯ ಹೋರಾಟದ ಕೊನೆಯಲ್ಲಿ ಎಡವಿದ ಬೆಂಗಳೂರು ಬುಲ್ಸ್ ತಂಡ ನಿರಾಸೆ ಕಂಡಿತು. ಇಲ್ಲಿನ ಏಕಾ ಅರೆನಾ ಬೈ ಟ್ರಾನ್ಸ್ ಸ್ಟೇಡಿಯಾದಲ್ಲಿ ಭಾನುವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 33–30ರಿಂದ ಬುಲ್ಸ್‌ ಎದುರು ಗೆದ್ದಿತು.

ಪಂದ್ಯದ ಮೊದಲ ರೇಡ್‌ನಲ್ಲೇ ಪಾಯಿಂಟ್ ಗಳಿಸಿದ ರೋಹಿತ್ ಕುಮಾರ್ ನಂತರ ಸತತವಾಗಿ ಯಶಸ್ವಿ ದಾಳಿ ಮುಂದುವರಿಸಿದರು. ಪವನ್ ಶೆರಾವತ್‌ ವಿಕಾಸ್ ಕಾಳೆ ಕೂಡ ಆರಂಭದ ರೇಡ್‌ಗಳಲ್ಲಿ ಪಾಯಿಂಟ್‌ಗಳನ್ನು ಹೆಕ್ಕಿದರು.

ಇದರ ಪರಿಣಾಮ ಮೊದಲ ನಾಲ್ಕು ನಿಮಿಷಗಳ ಆಟದಲ್ಲಿ ಬುಲ್ಸ್ 6–1ರಲ್ಲಿ ಮುನ್ನಡೆಯಿತು. ಡು ಆರ್ ಡೈ ರೇಡ್‌ನಲ್ಲಿ ಒಂದು ಪಾಯಿಂಟ್ ಗಳಿಸಿದ ವಿಕಾಸ್ ಖಂಡೋಲ ಅವರು ಹರಿಯಾಣ ನಿಟ್ಟುಸಿರು ಬಿಡುವಂತೆ ಮಾಡಿದರು.

ADVERTISEMENT

ನಂತರ ರಕ್ಷಣೆ ಮತ್ತು ಆಕ್ರಮಣದಲ್ಲಿ ಪರಿಣಾಮಕಾರಿ ಆಟವಾಡಿದ ತಂಡ ಹಿನ್ನಡೆಯನ್ನು 4–6ಕ್ಕೆ ಕುಗ್ಗಿಸುವಲ್ಲಿ ಯಶಸ್ವಿಯಾಯಿತು. ಆದರೆ ಪಟ್ಟುಬಿಡದ ಬುಲ್ಸ್ ಮತ್ತಷ್ಟು ಪ್ರಬಲ ಆಟವಾಡಿತು. 12ನೇ ನಿಮಿಷದಲ್ಲಿ ರವಿಕುಮಾರ್ ಅವರನ್ನು ಔಟ್ ಮಾಡಿದ ರೋಹಿತ್ ಕುಮಾರ್ ಲೀಗ್‌ನಲ್ಲಿ 600 ‍ಪಾಯಿಂಟ್ ಗಳಿಸಿದ ಸಾಧನೆ ಮಾಡಿದರು.

ಹರಿಯಾಣ ಸ್ಟೀಲರ್ಸ್ ಯಾವ ಹಂತದಲ್ಲೂ ಎದೆಗುಂದಲಿಲ್ಲ. 18ನೇ ನಿಮಿಷದಲ್ಲಿ 12–17ರ ಹಿನ್ನಡೆಯಲ್ಲಿದ್ದ ಸ್ಟೀಲರ್ಸ್ ವಿರಾಮದ ವೇಳೆ ಇದನ್ನು 16–17ಕ್ಕೆ ಕುಗ್ಗಿಸಿ ಸಮಾಧಾನಪಟ್ಟಿತು.

ಸಮಬಲದ ಹೋರಾಟ: ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. 17–17, 18–18, 21–21, 22–22ರಲ್ಲಿ ಪಂದ್ಯ ಸಾಗಿದಾಗ ಪ್ರೇಕ್ಷಕರು ತುದಿಗಾಲಲ್ಲಿ ನಿಂತರು. ಈ ಸಂದರ್ಭದಲ್ಲಿ ರೋಹಿತ್‌, ಪವನ್ ಅವರ ರೇಡಿಂಗ್ ಮತ್ತು ಅಮಿತ್ ಶೆರಾನ್ ಅವರ ಟ್ಯಾಕ್ಲಿಂಗ್ ಬಲದಿಂದ ಬುಲ್ಸ್‌ 26–23ರ ಮುನ್ನಡೆ ಗಳಿಸಿತು. ಆದರೆ ವಿಕಾಸ್ ಖಂಡೋಲ ಅವರ ಆಲ್‌ರೌಂಡ್ ಆಟದ ನೆರವಿನಿಂದ ಸ್ಟೀಲರ್ಸ್ 26–26ರ ಸಮಬಲ ಸಾಧಿಸಿ ತಿರುಗೇಟು ನೀಡಿತು. ಎರಡು ನಿಮಿಷಗಳ ಕಾಲ ಇದೇ ಸ್ಕೋರ್‌ನಲ್ಲಿ ಪಂದ್ಯ ಮುಂದುವರಿಯಿತು.

ನಂತರ ಪಂದ್ಯ ರೋಚಕವಾಯಿತು. ಕೊನೆಯ ಎರಡು ನಿಮಿಷಗಳು ಇದ್ದಾಗ ಪಂದ್ಯ 29–29ರಲ್ಲಿ ಸಮವಾಯಿತು. ಈ ಸಂದರ್ಭದಲ್ಲಿ ಭರವಸೆಯ ಆಟಗಾರ ಪವನ್ ಶೆರಾವತ್ ಅವರನ್ನು ಟ್ಯಾಕಲ್ ಮಾಡಿದ ಧರ್ಮರಾಜ ಚೇರಲಾತನ್ ಅವರು ಸ್ಟೀಲರ್ಸ್‌ಗೆ ಮಹತ್ವದ ಮುನ್ನಡೆ ಗಳಿಸಿಕೊಟ್ಟರು. ಮುಂದಿನ ರೇಡ್ ಮಾಡಿದ ವಿನಯ್‌ ಒಂದು ಪಾಯಿಂಟ್ ಗಳಿಸಿ ಸ್ಟೀಲರ್ಸ್‌ನ ಮುನ್ನಡೆಯನ್ನು 31–29ಕ್ಕೆ ಏರಿಸಿದರು. ನಂತರ ಆಧಿಪತ್ಯ ಸ್ಥಾಪಿಸಿ ಗೆಲುವಿನ ನಗೆ ಸೂಸಿತು.

ಸ್ಟೀಲರ್ಸ್ ಪರ ವಿಕಾಸ್ ಖಂಡೋಲ 12, ವಿಕಾಸ್ ಕಾಳೆ 6, ವಿನಯ್‌ 5 ಪಾಯಿಂಟ್ ಗಳಿಸಿದರು. ಬುಲ್ಸ್‌ನ ರೋಹಿತ್ 12, ಪವನ್ ಶೆರಾವತ್ 7 ಪಾಯಿಂಟ್ ಕಲೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.